ಮೀಸಲು ಪಡೆಯ ಇಬ್ಬರು ಯೋಧರು ಸೇರಿದಂತೆ 38 ಮಂದಿ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟಕ್ಕೆ ಬಲಿಯಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ಮೇಘಸ್ಫೋಟದಿಂದ ದಿಢೀರನೆ ಸೃಷ್ಟಿಯಾದ ಪ್ರವಾಹ ಕಿಶ್ವತ್ತರ್ ಜಿಲ್ಲೆಯ ಚಶೋಟಿ ಗ್ರಾಮಕ್ಕೆ ನುಗ್ಗಿದ್ದು, 38 ಶವಗಳನ್ನು ಹೊರಗೆ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಇದೆ.
ಪರಿಹಾರ ಕಾರ್ಯದಲ್ಲಿ ಸ್ಥಳೀಯ ಭದ್ರತಾ ಸಿಬ್ಬಂದಿ ಜೊತೆ ಭಾರತೀಯ ಸೇನೆ ಕೂಡ ಕೈ ಜೋಡಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಮಚೇಲ್ ಮಾತಾ ಯಾತ್ರೆಯ ಆರಂಭಿಕ ಸ್ಥಳವಾದ ಚಶೋಟಿ ಗ್ರಾಮ ಇದಾಗಿದೆ. ಅಲ್ಲದೇ ಹಿಮಾಲಯ ಪರ್ವತದಲ್ಲಿ ಕಿಶ್ವತ್ತರ್ ನಲ್ಲಿ ಮಾತಾ ಚಂಡಿ ಯಾತ್ರೆಗೆ ಬೈಕ್ ನಲ್ಲಿ ಹೋಗಬಹುದಾದ ಹಿಮಾಲಯ ತಪ್ಪಲಿನ ಕೊನೆಯ ಸ್ಥಳವಾಗಿದೆ.
ಮೇಘಸ್ಫೋಟದಿಂದ ಯಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇಘಸ್ಫೋಟಗಳು ಪದೇಪದೆ ಸಂಭವಿಸುತ್ತಿದ್ದು, ಇತ್ತೀಚೆಗೆ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮೇಘಸ್ಫೋಟದಿಂದ ದೀಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವಾರು ಮಂದಿ ಮೃತಪಟ್ಟಿದ್ದರು.


