ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಬಿಜೆಪಿಯ ಮಹತ್ವಾಕಾಂಕ್ಷೆಯ ಗುರಿ ಮಕಾಡೆ ಮಲಗಿದೆ.
ಪಕ್ಷದ ಮೂಲಗಳ ಪ್ರಕಾರ ಕಳೆದ ನವೆಂಬರ್‌ನಲ್ಲಿ ಆರಂಭವಾದ ಸದಸ್ಯತ್ವ ಆಂದೋಲನ ತೀರಾ ನೀರಸವಾಗಿ ಸಾಗಿದ್ದು, ಇದ್ದವರೂ ಪಕ್ಷದಿಂದ ದೂರವಾಗುತ್ತಿದ್ದಾರೆ.
ಈವರೆಗೆ 43 ಲಕ್ಷ ಪ್ರಾಥಮಿಕ ಸದಸ್ಯರನ್ನು ಸೇರಿಸಲಾಗಿದ್ದು, 50 ಲ್ಷಕದವರೆಗೆ ವಿಸ್ತರಿಸುವ ಭರವಸೆ ಇದೆ ಎಂದು ಸದಸ್ಯತ್ವ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ಬಿಜೆಪಿ ಸಂಸದ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
ದುರ್ಗಾ ಪೂಜಾ ಆಚರಣೆಗಳು ವಿಳಂಬಕ್ಕೆ ಕಾರಣ ಮತ್ತು ಕೋಲ್ಕತ್ತಾದಲ್ಲಿ ಆರ್ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸಾರ್ವಜನಿಕ ಪ್ರತಿಭಟನೆಗಳಿಂದಾಗಿ ಅಭಿಯಾನ ನಿಧಾನವಾಗಿದೆ ಎಂದಬುದು ಅವರ ಸಮಜಾಯಿಷಿ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವಾಗ ಕೇಂದ್ರ ಸಚಿವ ಅಮಿತ್ ಶಾ ಬಂಗಾಳ ಬಿಜೆಪಿ ಘಟಕಕ್ಕೆ 1 ಕೋಟಿ ಸದಸ್ಯರನ್ನು ತರುವ ಗುರಿಯನ್ನು ನಿಗದಿಪಡಿಸಿದ್ದರು.
ಗುರಿ ಈಡೇರಿಸಲು ಹಿರಿಯ ಬಿಜೆಪಿ ನಾಯಕರಾದ ಮಿಥುನ್ ಚಕ್ರವರ್ತಿ ಮತ್ತು ಲಾಕೆಟ್ ಚಟರ್ಜಿ ಅವರು ಕೋಲ್ಕತ್ತಾದ ಬೀದಿಬೀದಿಗಳಲಿ ಪಕ್ಷ ಸೇರುವಂತೆ ಜನರನ್ನು ಕೋರುತ್ತಿರುವುದು ಕಂಡು ಬಂತು. ಆದರೆ ಅವರ ಪ್ರಯತ್ನಕ್ಕೆ ಜನರ ಸ್ಪಂದನೆ ತೀರಾ ನೀರಸವಾಗಿತ್ತು ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ.
ಪ್ರತಿ ಆರು ವರ್ಷಗಳಿಗೊಮ್ಮೆ ನಡೆಸಲಾಗುವ ಬಿಜೆಪಿಯ ಸದಸ್ಯತ್ವ ಅಭಿಯಾನವು ೨೦೧೯ ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅದ್ಭುತ ಸ್ಪಂದನೆಗೆ ಸಾಕ್ಷಿಯಾಯಿತು. ವರದಿಗಳ ಪ್ರಕಾರ, ಪಕ್ಷದ ಸದಸ್ಯತ್ವವು ಶೇಕಡಾ 140ರಷ್ಟು ಹೆಚ್ಚಾಗಿ 35 ಲಕ್ಷ ಹೊಸ ಸದಸ್ಯರು ಸೇರಿದ್ದರು.
ಇದು 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗಮನಾರ್ಹ ಯಶಸ್ಸಿಗೆ ಕಾರಣವಾಗಿ ಬಿಜೆಪಿ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಆದರೆ 6 ವರ್ಷಗಳ ನಂತರ ಈಗ ಸನ್ನಿವೇಶ ಬದಲಾಗಿದೆ, ಪಕ್ಷದ ಸದಸ್ಯತ್ವದಲ್ಲಿ ಸುಮಾರು 40 ಪ್ರತಿಶತದಷ್ಟು ಮಂದಿ ಪಕ್ಷ ತೊರೆದಿದ್ದಾರೆ ಎಂದು ವರದಿಯಾಗಿದೆ.