Wednesday, December 24, 2025
Google search engine
Homeಆರೋಗ್ಯಮೆಡಿಕ್ಲೈಮ್ ಗಾಗಿ ಶೇ.44ರಷ್ಟು ಶಸ್ತ್ರಚಿಕಿತ್ಸೆ ನಕಲಿ: ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳು ಸತ್ತವರಿಗೂ ತುರ್ತು ಚಿಕಿತ್ಸೆ ನೀಡುತ್ತವೆ!

ಮೆಡಿಕ್ಲೈಮ್ ಗಾಗಿ ಶೇ.44ರಷ್ಟು ಶಸ್ತ್ರಚಿಕಿತ್ಸೆ ನಕಲಿ: ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳು ಸತ್ತವರಿಗೂ ತುರ್ತು ಚಿಕಿತ್ಸೆ ನೀಡುತ್ತವೆ!

ಸತ್ತ ವ್ಯಕ್ತಿಯ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು  ನಾಟಕವಾಡಿ ಹಣ ಸುಲಿಗೆ ಮಾಡಲು ಹೋಗಿ ಹೀರೋ ಕೈಯಲ್ಲಿ ಸಿಕ್ಕಿಬೀಳುತ್ತಾರೆ. ಹೀರೋ ಖಾಸಗಿ ಆಸ್ಪತ್ರೆಗಳ ಹಣದ ದಾಹ ಬಯಲು ಮಾಡಿ ಬಡವರಿಗೆ ಹಣ ಸಹಾಯ ಮಾಡುತ್ತಾನೆ.

ಇದು ಕೆಲವು ವರ್ಷಗಳ ಹಿಂದೆ ಬಂದ ಬಹುಜನಪ್ರಿಯ ಚಿತ್ರ. ಈ ಚಿತ್ರ ಎಷ್ಟು ಪರಿಣಾಮಕಾರಿ ಆಗಿತ್ತು ಅಂದರೆ ಹಲವು ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿತ್ತು. ಆದರೆ ಇದು ಸಿನಿಮಾ ಕಥೆ ಅಲ್ಲ ನಿಜ ಜೀವನದಲ್ಲಿಯೂ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ನಕಲಿ ಶಸ್ತ್ರ ಚಿಕಿತ್ಸೆ ಮಾಡುವ ವಿಷಯ ಇದೀಗ ಸಂಶೋಧನ ವರದಿಯಲ್ಲಿ ಬಹಿರಂಗವಾಗಿದೆ.

ಇತ್ತೀಚೆಗೆ ಖಾಸಗಿ ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುವ ಶೇ.44ರಷ್ಟು ಶಸ್ತ್ರಚಿಕಿತ್ಸೆಗಳು ನಕಲಿ ಎಂಬುದು ಪತ್ತೆಯಾಗಿದೆ.

ದೇಶದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಶೇ.55 ಹೃದಯ, ಶೇ. 48 ಗರ್ಭಾಶಯ ತೆಗೆಯುವ (ಹಿಸ್ಟರೆಕ್ಟಮಿ), ಶೇ.47 ಕ್ಯಾನ್ಸರ್, ಶೇ.48 ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗಳು, ಶೇ.45 ಸೀಸೇರಿಯನ್, ಅನೇಕ ಭುಜ ಮತ್ತು ಬೆನ್ನು ಶಸ್ತ್ರಚಿಕಿತ್ಸೆಗಳು ಅನಗತ್ಯ ಅಥವಾ ನಕಲಿ ಎಂದು ವರದಿಯಲ್ಲಿ ಬೆಳಕಿಗೆ ಬಂದಿದೆ.

ಸತ್ತ ರೋಗಿಗಳನ್ನು ಜೀವಂತರೆಂದು ತೋರಿಸಿ ಚಿಕಿತ್ಸೆ ನೀಡಿದಂತೆ ತೋರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಿದೆ. ಒಂದು ಪ್ರಸಿದ್ಧ ಆಸ್ಪತ್ರೆಯಲ್ಲಿ, 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದರೂ ಜೀವಂತನಿದ್ದಾನೆ ಎಂದು ತೋರಿಸಿ ಒಂದು ತಿಂಗಳ ಕಾಲ ವೆಂಟಿಲೇಟರ್‌ನಲ್ಲಿ ಇಟ್ಟು, ನಂತರ  ಸತ್ತಿದ್ದಾನೆಂದು  ಘೋಷಿಸಲಾಯಿತು. ದೂರುಗಳ ಬಳಿಕ ಆಸ್ಪತ್ರೆ ತಪ್ಪಿತಸ್ಥವೆಂದು ತೀರ್ಪು ಬಂದು 5 ಲಕ್ಷ ರೂ. ಪರಿಹಾರ ನೀಡಿತು.

ಅನೇಕ ಸಂದರ್ಭಗಳಲ್ಲಿ ಮೃತಪಟ್ಟ ರೋಗಿಗಳ ಮೇಲೆ ನಕಲಿ `ತುರ್ತು ಶಸ್ತ್ರಚಿಕಿತ್ಸೆ’ ನಡೆಸಲಾಗುತ್ತದೆ. ಕುಟುಂಬದಿಂದ ತಕ್ಷಣ ಹಣ ಕೇಳಲಾಗುತ್ತದೆ, ನಂತರ `ಶಸ್ತ್ರಚಿಕಿತ್ಸೆ ವೇಳೆ ರೋಗಿ ಮೃತಪಟ್ಟಿದ್ದಾರೆ’ ಎಂದು ಹೇಳಲಾಗುತ್ತದೆ. ಆಸ್ಪತ್ರೆ ಪೂರ್ಣ ಶಸ್ತ್ರಚಿಕಿತ್ಸೆಯ ಶುಲ್ಕ ವಸೂಲಿ ಮಾಡುತ್ತದೆ.

ಮೆಡಿಕ್ಲೇಮ್ ವಂಚನೆ ಎಂಬುದು ಭಯಾನಕ ಜಾಲವಾಗಿದೆ. ಭಾರತದಲ್ಲಿ ಶೇ. 68 ಜನರಿಗೆ ವೈದ್ಯಕೀಯ ವಿಮೆ ಇದೆ. ಅಗತ್ಯದ ಸಮಯದಲ್ಲಿ ಹೆಚ್ಚಿನ ಕ್ಲೈಮ್‌ಗಳನ್ನು ತಿರಸ್ಕರಿಸಲಾಗುತ್ತದೆ ಅಥವಾ ಭಾಗಶಃ  ಪಾವತಿಸಲಾಗುತ್ತದೆ.  ಪರಿಣಾಮವಾಗಿ ಕುಟುಂಬಗಳು ಭಾರೀ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ.

ಪ್ರಮುಖ ವಿಮಾ ಕಂಪನಿಗಳು 3,000ಕ್ಕೂ ಹೆಚ್ಚು ಪ್ರಸಿದ್ಧ ಆಸ್ಪತ್ರೆಗಳನ್ನು ಸುಳ್ಳು ಕ್ಲೈಮ್‌ಗಳಿಗಾಗಿ ಬ್ಲ್ಯಾಕ್‌ ಲಿಸ್ಟ್ ಮಾಡಿವೆ. ಕೋವಿಡ್ ಅವಧಿಯಲ್ಲಿ ಅನೇಕ ದೊಡ್ಡ ಆಸ್ಪತ್ರೆಗಳು ನಕಲಿ ಕೋವಿಡ್ ಪ್ರಕರಣಗಳಿಗೆ ವಿಮಾ ಹಣ ಪಡೆದುಕೊಂಡಿವೆ.

ಇದರ ಜೊತೆಗೆ ಮಾನವ ಅಂಗಾಂಗ ಕಳ್ಳಸಾಗಣೆ ಜಾಲವೂ ಕಾರ್ಯನಿರ್ವಹಿಸುತ್ತಿದೆ.

2019ರ ವರದಿಯಲ್ಲಿ ಕಾನ್ಪುರದ ಸಂಗೀತಾ ಕಶ್ಯಪ್ ಎಂಬ ಮಹಿಳೆಯನ್ನು ದೆಹಲಿಗೆ ಉದ್ಯೋಗ ಸಂದರ್ಶನಕ್ಕೆ ಕರೆಸಿ, ನೇಮಕಾತಿಗೆ ಮೊದಲು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಆಸ್ಪತ್ರೆಯಲ್ಲಿ ಇದ್ದಾಗ “ದಾನಿಗಳು” ಎಂದು ವೈದ್ಯರು ಮಾತನಾಡುತ್ತಿರುವುದನ್ನು ಕೇಳಿ ಅನುಮಾನಗೊಂಡು  ಅಲ್ಲಿಂದ ಓಡಿ ಹೋದಳು. ಆಕೆಯನ್ನು ಕರೆತಂದ ಸ್ನೇಹಿತ ₹50,000 ಬೇಡಿಕೆ ಇಟ್ಟು ಬೆದರಿಸಿದನು. ಪೊಲೀಸರಿಗೆ ದೂರು ನೀಡಿದ ನಂತರ ತನಿಖೆಯಲ್ಲಿ ಪೊಲೀಸರು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿರುವ ಬಹುಕೋಟಿ ಅಂತರರಾಷ್ಟ್ರೀಯ ಅಂಗಾಂಗ ಕಳ್ಳಸಾಗಣೆ ರಾಕೆಟ್ ಬಯಲಾಗಿತ್ತು.

ಮತ್ತೊಂದು ವಂಚನೆ “Hospital Referral Scam”. ವೈದ್ಯರು ರೋಗಿಗಳಲ್ಲಿ ಗಂಭೀರ ಕಾಯಿಲೆಯಿದೆ ಎಂದು ಹೇಳಿ ದೊಡ್ಡ ಬ್ರ್ಯಾಂಡ್ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಾರೆ ,ಇದು ಪ್ರತಿ ರೋಗಿಗೆ ಹಣ ನೀಡುವ ರೆಫರಲ್ ಯೋಜನೆಯ ಭಾಗವಾಗಿರುತ್ತದೆ.

ಮುಂಬೈನ  ಪ್ರಸಿದ್ಧ  ಆಸ್ಪತ್ರೆ ಒಮ್ಮೆ ಬಹಿರಂಗವಾಗಿ ಜಾಹೀರಾತು ನೀಡಿತ್ತು, ವರ್ಷಕ್ಕೆ 40 ರೋಗಿಗಳನ್ನು ಕಳುಹಿಸಿದರೆ ₹1 ಲಕ್ಷ, 50 ರೋಗಿಗಳಿಗೆ ₹1.5 ಲಕ್ಷ, 75 ರೋಗಿಗಳಿಗೆ ₹2.5 ಲಕ್ಷ ರೂ. ರೋಗಿಗಳಿಗೆ ನಿಜವಾಗಿಯೂ ಕಾಯಿಲೆಯಿದೆಯೇ ಇಲ್ಲವೇ ಎಂಬುದು ಅಲ್ಲಿನ ವಿಷಯ ಆಗಿರಲಿಲ್ಲ.

ಬೆಂಗಳೂರಿನ ಕೆಲವು ಪ್ರಸಿದ್ಧ ಪಥಾಲಜಿ ಲ್ಯಾಬ್‌ಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯಲ್ಲಿ ₹100 ಕೋಟಿಗೂ ಹೆಚ್ಚು ನಗದು ಮತ್ತು 3.5 ಕೆಜಿ ಚಿನ್ನ (ವೈದ್ಯರ ಲಂಚಕ್ಕಾಗಿ ಇಡಲಾಗಿತ್ತು) ಪತ್ತೆಯಾಯಿತು.

ವೈದ್ಯರು ಅನಗತ್ಯ ಟೆಸ್ಟ್‌ಗಳಿಗೆ ರೋಗಿಗಳನ್ನು ಕಳುಹಿಸಿ 40–50% ಕಮಿಷನ್ ಪಡೆಯುತ್ತಾರೆ. ಅನೇಕ ಲ್ಯಾಬ್‌ಗಳು ಕೇವಲ 1–2 ಟೆಸ್ಟ್ ಮಾಡಿ, ಉಳಿದ ವರದಿಗಳನ್ನು ಸುಳ್ಳಾಗಿ ತಯಾರಿಸುತ್ತವೆ. ಭಾರತದಲ್ಲಿ ಸುಮಾರು 2 ಲಕ್ಷ ಲ್ಯಾಬ್‌ಗಳಿದ್ದು, ಅವುಗಳಲ್ಲಿ1,000 ಮಾತ್ರ ಪ್ರಮಾಣೀಕೃತ, ಆದರೂ ವ್ಯವಹಾರ ಅತ್ಯಂತ ಲಾಭದಾಯಕ.

ಔಷಧ ಕಂಪನಿಗಳ ಲಂಚ ವ್ಯವಸ್ಥೆ ಕೂಡ  ಬಲಿಷ್ಠವಾಗಿಯೇ ಇದೆ.  20–25 ದೊಡ್ಡ ಔಷಧ ಕಂಪನಿಗಳು ವರ್ಷಕ್ಕೆ ₹1,000 ಕೋಟಿ ವೈದ್ಯರ ಮೇಲೆ ಖರ್ಚು ಮಾಡುತ್ತವೆ. ಕೋವಿಡ್ ಸಮಯದಲ್ಲಿ ನೋವಿನ ಔಷಧ Dolo ತಯಾರಕರು ₹1,000 ಕೋಟಿ “ಇನ್ಸೆಂಟಿವ್” ನೀಡಿದ್ದನ್ನು ಬಹಿರಂಗಪಡಿಸಲಾಯಿತು. ವೈದ್ಯರಿಗೆ ನಗದು, ವಿದೇಶ ಪ್ರವಾಸ, ಐಷಾರಾಮಿ ವಾಸ್ತವ್ಯಗಳು — ನಿರ್ದಿಷ್ಟ ಬ್ರ್ಯಾಂಡ್‌ಗಳನ್ನು ಬರೆಯಲು. ಉದಾಹರಣೆಗೆ, USV Ltd. ವೈದ್ಯರಿಗೆ ₹3 ಲಕ್ಷ ನಗದು ಹಾಗೂ ಆಸ್ಟ್ರೇಲಿಯಾ ಅಥವಾ ಅಮೆರಿಕಾ ಪ್ರವಾಸ ನೀಡುತ್ತದೆ ಎನ್ನಲಾಗಿದೆ. ಔಷಧ ಮತ್ತು ಶಸ್ತ್ರೋಪಕರಣಗಳನ್ನು ಕಂಪನಿಗಳು ಆಸ್ಪತ್ರೆಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತವೆ, ಆದರೆ ರೋಗಿಗಳಿಗೆ ಪೂರ್ಣ MRP ವಸೂಲಿ ಮಾಡಲಾಗುತ್ತದೆ.

Emcure ಕಂಪನಿಯ Temikure (ಕ್ಯಾನ್ಸರ್ ಔಷಧ) ಆಸ್ಪತ್ರೆಗಳಿಗೆ ₹1,950ಗೆ ಮಾರಲಾಗುತ್ತದೆ, ಆದರೆ ರೋಗಿಗಳಿಗೆ ₹18,645 ಬಿಲ್ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ.ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ಕೂಡ ಇದರಲ್ಲಿ ಭಾಗಿಯಾಗಿತ್ತು. 2016ರಲ್ಲಿ ಸರ್ಕಾರ ನೇಮಿಸಿದ ಸಮಿತಿಯೊಂದು, MCI ಹೊಸ ಮೆಡಿಕಲ್ ಕಾಲೇಜುಗಳಿಗೆ ಸುಲಭವಾಗಿ ಅನುಮೋದನೆ ನೀಡಿದರೂ, ವೈದ್ಯರು ಮತ್ತು ಆಸ್ಪತ್ರೆಗಳ ನಿಯಂತ್ರಣ ವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ವರದಿ ಮಾಡಿತು.

ವೈದ್ಯರು MCI ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದಾರೆ, ವೈದ್ಯರು ಜನರಿಕ್ (ಉಪ್ಪಿನ ಹೆಸರು) ಮಾತ್ರ ಬರೆಯಬೇಕು, ಆದರೆ ಬಹುತೇಕ ಪಾಲನೆ ಇಲ್ಲ. ಚಿಕಿತ್ಸೆಗೂ ಮೊದಲು ಸಂಪೂರ್ಣ ಶುಲ್ಕ ತಿಳಿಸಬೇಕು  ಆದರೆ ಪಾಲನೆಯಿಲ್ಲ, ಪರೀಕ್ಷೆ ಅಥವಾ ಚಿಕಿತ್ಸೆಗೆ ಮುನ್ನ ರೋಗಿಯ ತಿಳುವಳಿಕೆ ಸಹಮತಿ (Informed Consent) ಅಗತ್ಯ, ವೈದ್ಯಕೀಯ ದಾಖಲೆಗಳನ್ನು ಕನಿಷ್ಠ 3 ವರ್ಷ ಸಂರಕ್ಷಿಸಬೇಕು. ಅನೈತಿಕ, ಅಪ್ರಾಮಾಣಿಕ ಅಥವಾ ಅಸಮರ್ಥ ವೈದ್ಯರನ್ನು ಭಯವಿಲ್ಲದೆ ಬಹಿರಂಗಪಡಿಸಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments