ಹೆಲಿಕಾಫ್ಟರ್ ಪತನಗೊಂಡ ಪರಿಣಾಮ 6 ಮಂದಿ ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ಉತ್ತರಾಖಂಡ್ ನ ಉತ್ತರಕಾಶಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತಪಟ್ಟ 6 ಮಂದಿಯಲ್ಲಿ 5 ಮಂದಿ ಮಹಿಳೆಯರು ಹಾಗೂ ಒಬ್ಬ ಪೈಲೆಟ್ ಸೇರಿದ್ದಾರೆ. ಮುಂಬೈನ ಕಾಲಾ ಸೋನಿ (61), ವಿಜಯ ರೆಡ್ಡಿ (57), ರುಚಿ ಅಗರ್ ವಾಲ್ (56), ಉತ್ತರ ಪ್ರದೇಶದ ರಾಧಾ ಅಗರ್ ವಾಲ್ (79) ಮತ್ತು ಆಂಧ್ರಪ್ರದೇಶದ ವೇದಾವತಿ (48) ಮೃತಪಟ್ಟಿದ್ದಾರೆ.
ಗುಜರಾತ್ ಮೂಲದ 60 ವರ್ಷದ ಪೈಲೆಟ್ ರಾಬಿನ್ ಸಿಂಗ್ ಮೃತಪಟ್ಟಿದ್ದು, ಆಂಧ್ರಪ್ರದೇಶದ ಭಾಸ್ಕರ್ (51) ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮನಿ ಈ ದುರಂತ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೃತರ ಆತ್ಮಗಳಿಗೆ ಶಾಂತಿ ಕೋರಿದ್ದಾರೆ.
ಪ್ರವಾಸಿಗರು ಗಂಗನಾನಿ ರಸ್ತೆ ಮಾರ್ಗವಾಗಿ ಸುಮಾರು 30 ಕಿ.ಮೀ. ಪ್ರಯಾಣಿಸಿದ ಬಳಿ ಹೆಲಿಕಾಫ್ಟರ್ ಮಾರ್ಗವಾಗಿ ಡೆಹ್ರಾಡೂನ್ ನಿಂದ ಹರ್ಸಿಲ್ ಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಮೃತರ ಶವಗಳನ್ನು ಸಾಗಿಸಿದ್ದಾರೆ.


