ಒಂಟಿತನ ಮರೆಯಲು ತನಗಿಂತ ಅರ್ಧ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆ ಆದ 75 ವರ್ಷದ ವೃದ್ಧ ಮಾರನೇ ದಿನ ಬೆಳಿಗ್ಗಯೇ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜೌನ್ ಪುರ್ ಜಿಲ್ಲೆಯ ಕುಚ್ ಮುಚ್ ಗ್ರಾಮದ ನಿವಾಸಿ 75 ವರ್ಷದ ಸಂಗ್ರುರಾಮ್ ಮೃತಪಟ್ಟ ಮದುವೆ ಗಂಡು.
ಸಂಗ್ರುರಾಮ್ ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದು, ಮಕ್ಕಳು ಇರಲಿಲ್ಲ. ವೃದ್ಧನಾಗಿದ್ದರೂ ಏಕಾಂಗಿಯಾಗಿ ಬದುಕುತ್ತಿದ್ದು, ಕೃಷಿ ಮಾಡಿ ಜೀವನ ನಡೆಸುತ್ತಿದ್ದರು.
ಕುಟುಂಬಸ್ಥರು ಮತ್ತೊಂದು ಮದುವೆ ಆಗುವಂತೆ ಹೇಳಿದಾಗ ಒಪ್ಪಿದ ಸಂಗ್ರುರಾಮ್ ಸೆಪ್ಟೆಂಬರ್ 19ರಂದು ಅದೇ ಜಿಲ್ಲೆಯ ಜಲಾಲಪುರ್ ಬಡಾವಣೆಯ ತನಗಿಂತ ಅರ್ಧದಷ್ಟು ಕಡಿಮೆ ವಯಸ್ಸಿನ 35 ವರ್ಷದ ಮನ್ ಬಾವತಿ ಎಂಬಾಕೆಯನ್ನು ಮದುವೆ ಆದರು.
ಇಬ್ಬರೂ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದ ನಂತರ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಗಂಡನ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ ನೀಡಿದ್ದಳು. ಅಲ್ಲದೇ ರಾತ್ರಿ ಹೆಚ್ಚು ಸಮಯ ಮಾತನಾಡುತ್ತಾ ಕಾಲಕಳೆದೆವು ಎಂದು ಮನ್ ಬಾವತಿ ಹೇಳಿದ್ದಾಳೆ
ಬೆಳಿಗ್ಗೆ ದಿಢೀರನೆ ಅಸ್ವಸ್ಥಗೊಂಡ ಸಂಗ್ರುರಾಮ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವೃದ್ಧನ ಸಾವಿನ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ವಯಸ್ಸಾಗಿತ್ತು ಹಾಗಾಗಿ ಸಹಜವಾಗಿ ಮೃಪತಟ್ಟಿದ್ದಾರೆ ಎಂದು ಹೇಳಿದರೆ ಇನ್ನು ಕೆಲವರು ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ವೃದ್ಧನ ಕುಟುಂಬದ ಕೆಲವರು ದೆಹಲಿಯಿಂದ ಆಗಮಿಸಿದ್ದು, ಅಂತ್ಯ ಸಂಸ್ಕಾರ ಮಾಡದೇ ತಮಗಾಗಿ ಕಾಯುವಂತೆ ಹೇಳಿದ್ದಾರೆ. ಅಲ್ಲದೇ ಸಾವಿನ ಬಗೆಗ ಪೊಲೀಸರಿಗೆ ದೂರು ನೀಡಬೇಕು ಮತ್ತು ತನಿಖೆ ನಂತರ ಸತ್ಯ ಹೊರಗೆ ಬರಲಿ ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.


