ಬಸ್ ಚಲಿಸುತ್ತಿರುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ನೆಲಮಂಗಲ ಟೌನ್ ಬಳಿ ಬಿನ್ನಮಂಗಲದಲ್ಲಿ ಸಂಭವಿಸಿದೆ. ಸಾವಿನ ದವಡೆಯಲ್ಲೂ ಚಾಲಕ ಸಮಯಪ್ರಜ್ಞೆ ಮೆರೆದಿದ್ದರಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಡಿಪೋ 40ರಲ್ಲಿ ಕಳೆದ 6 ವರ್ಷದಿಂದ ಡೈವರ್ ಆಗಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಚಾಲಕ ಕಿರಣ್ ಕುಮಾರ್ (40) ಮೃತ ಚಾಲಕ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್ ಮಾಡಿಕೊಂಡು ಬುಧವಾರ ಬೆಳಿಗ್ಗೆ ಹೋಗುತ್ತಿರುವಾಗ ಹೃದಯಾಘಾತವಾಗಿದೆ. ಕೂಡಲೇ ಚಾಲಕ ಕಿರಣ್ಕುಮಾರ್ ಬಸ್ ಅನ್ನು ರಸ್ತೆಬದಿ ನಿಲ್ಲಿಸಿದ್ದಾರೆ. ಇದರಿಂದ ಬಸ್ ನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.
ಬಸ್ ಚಾಲನೆ ಮಾಡುವಾಗಲೇ ಹೃದಯಘಾತವಾಗಿದ್ದರೂ ಸಮಯಪ್ರಜ್ಞೆ ತೋರಿದ ಚಾಲಕ ರಸ್ತೆ ಬದಿ ಬಸ್ ಯಶಸ್ವಿಯಾಗಿ ನಿಲ್ಲಿಸಿದ್ದಾರೆ. ಕೂಡಲೇ ಪ್ರಯಾಣಿಕರು ನಿರ್ವಾಹಕ ಒಬಳೇಶ್ ಸಹಾಯದಿಂದ ಚಾಲಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಾಗಲೇ ಕಿರಣ್ಕುಮಾರ್ ಕೊನೆಯುಸಿರೆಳೆದಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.