ಸಾಕಿದ ಬೆಕ್ಕಿನ ಸಾವು ಸಹಿಸದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ ನಡೆದಿದೆ.
ಸತ್ತ ಬೆಕ್ಕು ಬದುಕಿ ಬರಬಹುದು ಎಂದು ಎರಡು ದಿನಗಳ ಕಾಲ ಮನೆಯಲ್ಲೇ ಶವ ಇರಿಸಿಕೊಂಡಿದ್ದ ಮಹಿಳೆ, ಬೆಕ್ಕು ಜೀವ ಪಡೆಯಲ್ಲ ಎಂಬುದು ತಿಳಿಯುತ್ತಿದ್ದಂತೆ ಮೂರನೇ ದಿನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಮೋರಾ ಜಿಲ್ಲೆಯ ಹಸನ್ ಪುರ್ ಗ್ರಾಮದ ನಿವಾಸಿ 32 ವರ್ಷದ ಮಹಿಳೆ ಪೂಜಾ ಬೆಕ್ಕಿಗಾಗಿ ಜೀವ ಬಿಟ್ಟಿದ್ದಾರೆ.
ಪೂಜಾಗೆ 8 ವರ್ಷಗಳ ಹಿಂದೆ ದೆಹಲಿ ಮೂಲದ ವ್ಯಕ್ತಿಯೊಂದಿಗೆ ಮದುವೆ ಆಗಿತ್ತು. ಎರಡು ವರ್ಷಗಳ ಹಿಂದೆ ವಿಚ್ಛೇದನದೊಂದಿಗೆ ಮದುವೆ ಮುರಿದುಬಿದ್ದಿತು. ನಂತರ ತಾಯಿ ಗರ್ಜಾ ದೇವಿ ಜೊತೆ ತವರು ಮನೆಯಲ್ಲಿ ವಾಸವಾಗಿದ್ದರು.
ಒಂಟಿಯಾಗಿದ್ದ ಪೂಜಾ ಬೆಕ್ಕು ಸಾಕಲು ಆರಂಭಿಸಿದರು. ಆದರೆ ಬೆಕ್ಕು ಗುರುವಾರ ಮೃತಪಟ್ಟಿದ್ದು, ತಾಯಿ ಬೆಕ್ಕಿನ ಅಂತ್ಯಕ್ರಿಯೆ ಮಾಡಲು ಹೇಳಿದರೂ ಆಕೆ ಕೇಳಿಲ್ಲ. ಎರಡು ದಿನಗಳ ಕಾಲ ಬೆಕ್ಕಿನ ಶವವನ್ನು ಇರಿಸಿಕೊಂಡಿದ್ದಾರೆ. ತಾಯಿ ಹಾಗೂ ಕುಟುಂಬದವರು ಬೆಕ್ಕನ್ನು ಮಣ್ಣು ಮಾಡಲು ಯತ್ನಿಸಿದರೂ ಆಕೆ ಬಿಟ್ಟಿಲ್ಲ. ಬೆಕ್ಕು ಮತ್ತೆ ಬದುಕಿ ಬರುತ್ತೆ ಎಂದು ವಾದ ಮಾಡುತ್ತಿದ್ದಳು.
ಶನಿವಾರ ಮಧ್ಯಾಹ್ನ ತಾಯಿ ಗರ್ಜಾ ದೇವಿ ಮಹಡಿ ಮೇಲೆ ತೆರಳಿದಾಗ ಪೂಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಪಕ್ಕದಲ್ಲೇ ಬೆಕ್ಕಿನ ಶವ ಕೂಡ ಇತ್ತು. ತಾಯಿ ಕೂಗಿಕೊಂಡಾಗ ನೆರೆಮನೆಯವರು ಬಂದಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


