ಕಳೆದ ಹಲವು ತಿಂಗಳಿನಿಂದ ಕಡಿಮೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರ ಮತ್ತೆ ಏರಿಕೆಯಾಗಿದ್ದು, ನೂತನ ದರ ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿದೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ದರವನ್ನು ಸಿಲಿಂಡರ್ ಗೆ 15.50 ರೂ. ಹೆಚ್ಚಿಸಲಾಗಿದ್ದು, ಇಂದಿನಿಂದಲೇ (ಅಕ್ಟೋಬರ್1) ಜಾರಿಗೆ ಬರಲಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.
ಜಿಎಸ್ ಟಿ ಕಡಿತದಿಂದ ಸಂಭ್ರಮದಲ್ಲಿದ್ದ ವ್ಯಾಪಾರಿಗಳಿಗೆ ಈ ನೂತನ ದರದಿಂದ ಆಘಾತ ಉಂಟಾಗಿದ್ದರೆ, ಗೃಹ ಬಳಕೆಯ 14.2 ಕೆಜಿಯ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ಮನೆಯಲ್ಲಿ ಬಳಸುವ ಅಡುಗೆ ಅನಿಲ ದರದಲ್ಲಿ ವ್ಯಾತ್ಯಾಸ ಆಗದೇ ಇರುವುದು ಸಮಾಧಾನ ತಂದಿದೆ.
ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,595.50 ರೂ. ಮುಂಬೈನಲ್ಲಿ 1,547 ರೂ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ 1,700 ಮತ್ತು 1,754 ರೂ.ಗೆ ಏರಿಕೆಯಾಗಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಓಸಿ) ತಿಳಿಸಿದೆ.
ಏಕಾಏಕಿ ಈ ದರ ಏರಿಕೆಯಿಂದಾಗಿ ದೇಶದ ರಾಜಧಾನಿ ಸೇರಿದಂತೆ ಎಲ್ಲೆಡೆ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕಾರಣ ಅವರು ತಮ್ಮ ದೈನಂದಿನ ಕಾರ್ಯಗಳಾದ ಸಣ್ಣ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ವ್ಯವಹಾರಗಳಿಗಾಗಿ ಈ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಗೃಹ ಬಳಕೆಗೆ ಉಪಯೋಗಿಸುವ ಸಿಲಿಂಡರ್‌ಗಳ (ಡೊಮೆಸ್ಟಿಕ್) ದರಗಳು ಏಪ್ರಿಲ್‌ನಿಂದ ಯಾವುದೇ ಬದಲಾವಣೆ ಕಂಡಿಲ್ಲ. ದೆಹಲಿಯಲ್ಲಿ 853 ರೂ., ಚೆನ್ನೈನಲ್ಲಿ 868.50 ರೂ., ಕೋಲ್ಕತ್ತಾದಲ್ಲಿ 879 ರೂ., ಮುಂಬೈನಲ್ಲಿ 852.50 ರೂ. ದರ ಚಾಲ್ತಿಯಲ್ಲಿದೆ.
ಎಲ್‌ಪಿಜಿ ಸಿಲಿಂಡರ್‌ನ ನಿಖರವಾದ ದರಗಳನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಆದ https://iocl.com/prices-of-petroleum-products ನಲ್ಲಿ ನೋಡಬಹುದು. ಈ ವೆಬ್‌ಸೈಟ್‌ನಲ್ಲಿ, ಎಲ್‌ಪಿಜಿ ದರಗಳ ಜೊತೆಗೆ, ಜೆಟ್ ಇಂಧನ (Jet Fuel), ಆಟೋ ಗ್ಯಾಸ್ (Auto Gas), ಸೀಮೆಎಣ್ಣೆ (Kerosene) ಮುಂತಾದ ಇತರ ಇಂಧನಗಳ ದರಗಳನ್ನೂ ಸಹ ನೀವು ಪರಿಶೀಲಿಸಬಹುದು.
ಮುನ್ನೆಚ್ಚರಿಕೆ
ಅಡುಗೆಮನೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಾವುವು: ಅಡುಗೆ ಪೂರ್ಣಗೊಂಡ ನಂತರ ಮತ್ತು ಇತರ ಸಮಯಗಳಲ್ಲಿ, ಸಿಲಿಂಡರ್‌ನ ರೆಗ್ಯುಲೇಟರ್ ಆಫ್ ಮಾಡಿ ಇಡುವುದು ಉತ್ತಮ. ಹೊಸ ಸಿಲಿಂಡರ್ ಬಳಸುವಾಗ ಸೂಕ್ತ ಕಾಳಜಿ ವಹಿಸಬೇಕು. ಹೊಸ ಸಿಲಿಂಡರ್‌ನ ಸೀಲ್ ತೆಗೆದು, ಕ್ಯಾಪ್ ತೆರೆದ ನಂತರ ಅದನ್ನು ದೀರ್ಘಕಾಲ ಹಾಗೆಯೇ ಇಡುವುದು ಸರಿಯಲ್ಲ.
ಕ್ಯಾಪ್ ತೆಗೆದ ನಂತರ, ಸಿಲಿಂಡರ್‌ನಿಂದ ಯಾವುದೇ ಗ್ಯಾಸ್ ಸೋರಿಕೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಸೋರಿಕೆ ಕಂಡುಬಂದರೆ, ಸಂಬಂಧಿತ ಡೀಲರ್‌ರನ್ನು ಸಂಪರ್ಕಿಸಿದ ನಂತರವೇ ಸಿಲಿಂಡರ್ ಬಳಕೆಯನ್ನು ಪ್ರಾರಂಭಿಸಬೇಕು.
ಪ್ರಮುಖವಾಗಿ ಸರ್ಕಾರದ ಅನುಮೋದನೆ ಪಡೆದ ಅಧಿಕೃತ ಡೀಲರ್‌ಗಳ ಮೂಲಕ ಮಾತ್ರ ಸಿಲಿಂಡರ್‌ಗಳನ್ನು ಖರೀದಿಸಬೇಕು. ಕೆಲವೊಮ್ಮೆ ತುರ್ತು ಪರಿಸ್ಥಿತಿಯೆಂದು ನೆರೆಹೊರೆಯವರಿಂದ ಅಥವಾ ಖಾಸಗಿ ಅಂಗಡಿಗಳಿಂದ ಸಿಲಿಂಡರ್ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು. ಅಂತಹ ಸಂದರ್ಭಗಳಲ್ಲಿ, ಸಿಲಿಂಡರ್ ಮೇಲೆ ಸಂಬಂಧಿತ ಅಧಿಕೃತ ಮುದ್ರೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಹಾಗೇ, ಸಿಲಿಂಡರ್‌ಗಳನ್ನು ಬಿಸಿಲು ತಾಗದ ಸ್ಥಳದಲ್ಲಿ ಮತ್ತು ಗಾಳಿ ಚೆನ್ನಾಗಿ ಆಡುವ ಜಾಗದಲ್ಲಿ ಇಡುವುದು ಒಳ್ಳೆಯದು.


