ವಿಶ್ವದ ಶ್ರೀಮಂತ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಹುಂಡಿಗೆ ಒಂದೇ ದಿನ 5.3 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.
ಸೋಮವಾರ ತಿರುಪತಿ ತಿಮ್ಮನದ ದರ್ಶನಕ್ಕೆ 78,730 ಭಕ್ತರು ಭೇಟಿ ನೀಡಿದ್ದಾರೆ. ಸಾಮಾನ್ಯ ಹಬ್ಬ-ಹರಿದಿನಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಆಗಿದ್ದರೂ ಒಂದೇ ದಿನ 5.3 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.
ಕಳೆದ ಒಂದು ವರ್ಷದಲ್ಲಿ ದೇವಸ್ಥಾನಕ್ಕೆ ಒಂದೇ ದಿನದಲ್ಲಿ ಸಂಗ್ರಹವಾದ ಅತೀ ದೊಡ್ಡ ಮೊತ್ತದ ದೇಣಿಗೆ ಇದಾಗಿದೆ. ಸಾಮಾನ್ಯವಾಗಿ ಹಬ್ಬ ಹರಿದಿನಗಳು ಮತ್ತು ಬೇಸಿಗೆ ಕಾಲದಲ್ಲಿ 1 ಲಕ್ಷಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ ಹಲವು ಉದಾಹರಣೆಗಳಿವೆ. ಆದರೆ ಭಕ್ತರ ಸಂಖ್ಯೆಯಲ್ಲಿ ಕಡಿಮೆ ಆಗಿದ್ದರೂ ದೇಣಿಗೆ ಸಂಗ್ರಹದಲ್ಲಿ ಹೆಚ್ಚಾಗಿರುವುದು ವಿಶೇಷವಾಗಿದೆ.
2023ರ ಜನವರಿ 2ರಂದು ಒಂದೇ ದಿನದಲ್ಲಿ 7.68 ಕೋಟಿ ರೂ. ದೇಣಿಗೆ ಸಂಗ್ರಹವಾಗಿರುವುದು ಇದುವರೆಗಿನ ದಾಖಲೆಯಾಗಿದೆ. ಅಲ್ಲದೇ ಒಂದೇ ದಿನ 6 ಕೋಟಿ ರೂ.ಗೂ ಅಧಿಕ ದೇಣಿಗೆ ಹಲವು ಬಾರಿ ಸಂಗ್ರಹವಾಗಿದೆ. ಆದರೆ ಈ ಬಾರಿ 5.3 ಕೋಟಿ ರೂ. ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮೊತ್ತವಾಗಿದೆ.
ಸಂಪತ್ತಿಗೆ ಹೆಸರುವಾಸಿಯಾದ ತಿರುಪತಿಗೆ ಪ್ರತಿ ತಿಂಗಳು 100 ಕೋಟಿಯಿಂದ 140 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗುತ್ತಿದೆ. ಸುಮಾರು 100 ಕೆಜಿಯಿಂದ 140 ಕೆಜಿ ಚಿನ್ನವನ್ನು ಭಕ್ತರಿಂದ ದೇಣಿಗೆಯಾಗಿ ಪಡೆಯಲಾಗುತ್ತದೆ. ಬ್ಯಾಂಕುಗಳಲ್ಲಿ ಟಿಟಿಡಿಯ ಸ್ಥಿರ ಠೇವಣಿಗಳ ಮೊತ್ತ 20,000 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು ಹೊಂದಿದೆ.


