ವಾಣಿಜ್ಯ ನಗರಿ ಮುಂಬೈನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ಅವಘಢದಲ್ಲಿ ತಾಯಿ-ಮಮಗಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.
ಬಹುಮಹಡಿ ವಸತಿ ಕಟ್ಟಡದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟು 10 ಮಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿ ಸಂಭವಿಸಿದೆ.
ದಟ್ಟ ಬೆಂಕಿ ಮತ್ತು ಹೊಗೆ ವರದಿಯಾಗುತ್ತಿದ್ದಂತೆ ತಕ್ಷಣಕ್ಕೆ ಐದು ಅಗ್ನಿಶಾಮಕ ವಾಹನಗಳು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಈ ವೇಳೆ ಗಂಭೀರ ಸ್ಫೋಟದಿಂದ ಗಾಯಗೊಂಡಿದ್ದ ಕುಟುಂಬದ ಇತರೆ ಸದಸ್ಯರನ್ನು ರಕ್ಷಿಸಲಾಗಿದೆ. ಬೆಂಕಿಯಿಂದ ತೀವ್ರ ಸುಟ್ಟುಗಾಯಗಳಿಂದ ಬಳಲುತ್ತಿದ್ದ ತಾಯಿ ಮಗಳು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಶಿ ಪ್ರದೇಶದ ಸೆಕ್ಟರ್ 14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್‌ನ 10ನೇ ಮಹಡಿಯಲ್ಲಿ ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗೂ ಹರಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ ಬಾಲಕಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾಶಿಯ ಎರಡು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಬೆಂಕಿ ಅವಘಡದ ಕುರಿತು ಮಾಹಿತಿ ದೊರೆಯುತ್ತಿದ್ದಂತೆ 40 ಅಗ್ನಿಶಾಮಕ ದಳದ ಸಿಬ್ಬಂದಿ, 8 ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಮಂಗಳವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಕಾಮೋಥೆಯಲ್ಲಿ ಸೆಕ್ಟರ್ 36 ರ ಅಂಬೆ ಶ್ರದ್ಧಾ ಸಹಕಾರಿ ಸಂಘದಲ್ಲಿ ಮೂರನೇ ಮಹಡಿಯ ಫ್ಲಾಟ್‌ನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡು ತಾಯಿ ಮತ್ತು ಮಗಳು ಅಸುನೀಗಿದ್ದಾರೆ.


