ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.
2026ರ ಬೋರ್ಡ್ ಪರೀಕ್ಷೆಗಳು ಮಂಗಳವಾರ ಆರಂಭವಾಗಲಿದ್ದು, ಮೊದಲು ಈ ಮಾಹಿತಿ ಹೊರಬಿದ್ದಿದೆ.ಸಿಬಿಎಸ್ಸಿಯ ಮೊದಲ ಆವೃತ್ತಿಯಲ್ಲಿ ಕನಿಷ್ಠ ಮೂರು ವಿಷಯಗಳನ್ನು ಪ್ರಯತ್ನಿಸುವುದು ಅವಶ್ಯಕ. ಮೂರು ಪತ್ರಿಕೆಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಎರಡನೇ ಆವೃತ್ತಿ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಂತಹ ವಿದ್ಯಾರ್ಥಿಗಳನ್ನು “ಅಗತ್ಯ ಪುನರಾವರ್ತನೆ” ವಿಭಾಗದಲ್ಲಿ ಸೇರಿಸಲಾಗುವುದು. ಅವರು ಮುಂದಿನ ವರ್ಷ ಎದುರಾಗಲಿರುವ ಮೊದಲ ಪರೀಕ್ಷೆಯಲ್ಲಿ ಮತ್ತೆ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದೆ.
ಸಿಬಿಎಸ್ಸಿಯ 10ನೇ ತರಗತಿ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ. ಮೊದಲ ಪರೀಕ್ಷೆ ಬರೆದು ಪಾಸ್ ಆದ ಎಲ್ಲಾ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಉತ್ತಮಗೊಳಿಸಬೇಕು ಎಂಬ ಇಚ್ಚೆ ಹೊಂದಿದ್ದಲ್ಲಿ ಮತ್ತೆ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಷಯಗಳ ಪರೀಕ್ಷೆಯನ್ನು ಎರಡನೇ ಬೋರ್ಡ್ ಪರೀಕ್ಷೆಯಲ್ಲಿ ಎದುರಿಸಿ, ಅಂಕ ಗಳಿಸಿಕೊಳ್ಳಬಹುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸನ್ಯಾಂ ಭಾರದ್ವಾಜ್ ತಿಳಿಸಿದ್ದಾರೆ.
ಮೊದಲ ಪರೀಕ್ಷೆಯಲ್ಲಿ ವಿದ್ಯಾರ್ಥಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷೆಯನ್ನು ಎದುರಿಸಲು ವಿಫಲರಾದರೆ, ಅವರು ಯಾವುದೇ ಕಾರಣಕ್ಕೂ ಎರಡನೇ ಪರೀಕ್ಷೆಯಲ್ಲಿ ಕೂರಲು ಅರ್ಹತೆ ಪಡೆಯುವುದಿಲ್ಲ. ಇಂತಹ ವಿದ್ಯಾರ್ಥಿಗಳನ್ನು ಅಗತ್ಯ ಪುನರಾವರ್ನತೆ ವಿಭಾಗದಲ್ಲಿ ಸೇರಿಸಲಾಗುವುದು. ಅವರು ಮತ್ತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಎದುರಾಗಲಿರುವ ಪರೀಕ್ಷೆಗೆ ಮಾತ್ರ ಹಾಜರಾಗಬಹುದು ಎಂದು ತಿಳಿಸಲಾಗಿದೆ.
ಎರಡನೇ ಪರೀಕ್ಷೆಯು ಕಟ್ಟುನಿಟ್ಟಾಗಿ ದೇಶೀಯ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದು, ಇದು ಕೇವಲ ಪ್ರದರ್ಶನ ಉತ್ತಮಗೊಳಿಸಲು ಮಾತ್ರ ಇದೆ.
ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಾಳೆಯಿಂದ ಪ್ರಾರಂಭವಾಗಲಿದೆ. ಈ ವರ್ಷದ ಪರೀಕ್ಷೆಗಳಲ್ಲಿ ಹಲವಾರು ಸುಧಾರಣೆಗಳು ಮತ್ತು ಕಠಿಣ ನಿಯಮಗಳು ಕಂಡುಬಂದಿವೆ. 10ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10ರ ನಂತರ ಪ್ರವೇಶ ನಿಷೇಧದ ನಿಯಮ, ಶೇ.75ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಎದುರಿಸಲು ಅವಕಾಶದಂತಹ ನಿಯಮಗಳನ್ನು ಒಳಗೊಂಡಿದೆ.


