ಭೂಕುಸಿತದಿಂದ ನಾಲ್ವರು ಮೃತಪಟ್ಟು, ಮೂವರು ನಾಪತ್ತೆಯಾಗಿರುವ ಘಟನೆ ಸಿಕ್ಕಿಂನ ಯಾಂಗ್ಥಾಂಗ್ನ ರಿಂಬಿ ಗುರುವಾರ ತಡರಾತ್ರಿ ಸಂಭವಿಸಿದೆ.
ಸಂತ್ರಸ್ತರನ್ನು ತಲುಪಲು ಸೂಕ್ತ ಮಾರ್ಗವಿಲ್ಲದ ಕಾರಣ ತಾತ್ಕಾಲಿಕ ಮರದ ಸೇತುವೆ ನಿರ್ಮಾಣ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ಗಾಯಗೊಂಡ ಇಬ್ಬರು ಮಹಿಳೆಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭೂಕುಸಿತ ಸಂಭವಿಸಿದ ಸ್ಥಳದ ಕುರಿತು ಮಾಹಿತಿ ದೊರೆತ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದೆವು. ಸ್ಥಳೀಯ ಪೊಲೀಸರು, ಗ್ರಾಮಸ್ಥರು ಮತ್ತು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ ಜನರ ರಕ್ಷಣೆಗೆ ಮುಂದಾದರು. ಮೂವರು ಸಾವನ್ನಪ್ಪಿದ್ದಾರೆ ಎಂದು ಎಸ್‌ಪಿ ಗೇಜಿಂಗ್ ತ್ಸೆರಿಂಗ್ ಶೆರ್ಪಾ ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರೂ ಮಹಿಳೆಯರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರ ಪೈಕಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮತ್ತೊಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಮೂವರು ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದರು.
ಎರಡು ತಿಂಗಳ ಹಿಂದೆಯೂ ಸಿಕ್ಕಿಂನಲ್ಲಿ ಭಾರಿ ಮಳೆಯಿಂದಾಗಿ ಸೇನಾ ಶಿಬಿರದ ಮೇಲೆ ಭೂಮಿ ಕುಸಿದಿತ್ತು. ಇದರಿಂದ ಮೂವರು ಮೃತಪಟ್ಟು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆರು ಮಂದಿ ಯೋಧರು ನಾಪತ್ತೆಯಾಗಿದ್ದರು.
ಸಿಲಿಗುರಿ-ಸಿಕ್ಕಿಂ ಕಾರಿಡಾರ್‌ನ ರಾಷ್ಟ್ರೀಯ ಹೆದ್ದಾರಿ 10ರ ಲಿಕುವೀರ್‌ನಲ್ಲೂ ಭೂ ಕುಸಿತ ಸಂಭವಿಸಿತ್ತು. ಈ ರಸ್ತೆಯ ಒಂದು ಭಾಗ ತೀಸ್ತಾ ನದಿಯಲ್ಲಿ ಮುಳುಗಿ ಹೋಗಿತ್ತು. ಇದೀಗ ರಕ್ಷಣಾ ಕಾರ್ಯಾಚರಣೆಯ ಬಳಿಕ ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಮಳೆಗಾಲದ ಆರಂಭದಲ್ಲಿ ತತ್ತರಿಸಿದ್ದ ಈಶಾನ್ಯ ರಾಜ್ಯಗಳು ಸಾಕಷ್ಟು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾಗೂ ಜನಜೀವನ ನಷ್ಟಕ್ಕೊಳಗಾಗಿತ್ತು.
ಈ ನಡುವೆ ಭಾರತೀಯ ಸೇನೆಯ ವಿಶೇಷ ಪಡೆಗಳು ಮತ್ತು ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಸ್ ಜಂಟಿಯಾಗಿ ಆಗಸ್ಟ್ 30ರಿಂದ ಸೆಪ್ಟೆಂಬರ್ 5ರ ವರೆಗೆ 17,000 ಅಡಿ ಎತ್ತರದಲ್ಲಿ ಸ್ಕೂಬಾ ಮತ್ತು ಯುದ್ಧ ಡೈವಿಂಗ್ ವ್ಯಾಯಾಮವನ್ನು ನಡೆಸಿತು. ಈ ರೀತಿಯ ತರಬೇತಿಗಳು ಅನಿರೀಕ್ಷಿತ ಸಂದರ್ಭದಲ್ಲಿ ಮತ್ತು ಯುದ್ದಭೂಮಿಗಳಲ್ಲಿ ಸೈನಿಕರ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಅಗತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇತ್ತೀಚಿಗೆ, ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತಗಳು, ಹಠಾತ್ ಪ್ರವಾಹ ಉಂಟಾಗಿತ್ತು. ಮಂಡಿ ಜಿಲ್ಲೆಯ ಸುಂದರನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ಎರಡು ಮನೆಗಳು ಕುಸಿದಿದ್ದವು. ಆರು ಮಂದಿ ಸಾವನ್ನಪ್ಪಿದ್ದರು.


