ಬೆಳಗಾವಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿದ್ದ ಗೋವಾ ಶಾಸಕ ಮೃತಪಟ್ಟಿದ್ದು, ಆಟೋ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ.
ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (68) ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅಟೋ ಚಾಲಕ ಆರೋಪಿ ಸುಭಾಶ್ ನಗರ ನಿವಾಸಿ ಮುಜಾಹಿನ್ ಎಂಬಾತನನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮಾಜಿ ಶಾಸಕ ಮಾಮಲೇದಾರ್ ಮತ್ತು ಆಟೋ ಚಾಲಕನ ನಡುವೆ ಶ್ರೀನಿವಾಸ್ ಲಾಡ್ಜ್ ಮುಂದೆ ಗಲಾಟೆ ಆರಂಭವಾಗಿದೆ.
ಮಾಮಲೇದಾರ್ ಕಾರು ಆಟೋಗೆ ಡಿಕ್ಕಿ ಹೊಡೆದ ಕಾರಣ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ಆಟೋ ಚಾಲಕನ ಹಲ್ಲೆಯಿಂದ ಮಾಮಲೇದಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಮೃತಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಗಳ ಪ್ರಕಾರ ಮಾತಿನ ಸಂಘರ್ಷದ ವೇಳೆ ಮಾಮಲೇದಾರ್ ಆಟೋ ಚಾಲಕನ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕ ಕಪಾಳಕ್ಕೆ ತಿರುಗಿಸಿ ಹೊಡೆದಿದ್ದಾನೆ. ಇದರಿಂದ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಜನರು ಗಲಾಟೆ ನಿಲ್ಲಿಸಲು ಯತ್ನಿಸಿದಾಗ ಆಟೋ ಚಾಲಕ ಮತ್ತೆ ಹೊಡೆದಿದ್ದರಿಂದ ಮಾಮಲೇದಾರ್ ಲಾಡ್ಜ್ ಗೆ ಹೋಗಿದ್ದಾರೆ.
ಲಾಡ್ಜ್ ನಲ್ಲಿ ಮೆಟ್ಟಿಲು ಹತ್ತುತ್ತಿದ್ದಾಗ ಮಾಮಲೇದಾರ್ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


