ಹೈದರಾಬಾದ್ ನಲ್ಲಿ ಚೆರ್ಲಾಪಲ್ಲಿಯಲ್ಲಿರುವ ಔಷಧ ನಿರ್ಮಾಣ ಕಾರ್ಖಾನೆ ಮೇಲೆ ದಾಳಿ ಮಾಡಿದ ಮುಂಬೈ ಪೊಲೀಸರು 12,000 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.
ಕಾರ್ಖಾನೆಯಲ್ಲಿ ನಿಷೇಧಿತ ಮೆಥಲೆಂಡೊಕ್ಸಿ ಮತ್ತು ಮೆಥಂಪಥೆಮೈನಿ ಮುಂತಾದ ಮಾದಕ ವಸ್ತುಗಳನ್ನು ತಯಾರಿಸಲಾಗುತ್ತಿದ್ದು, ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ 12 ಸಾವಿರ ಕೋಟಿ ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಮುಂಬೈನಲ್ಲಿ 23 ವರ್ಷ ಬಾಂಗ್ಲಾದೇಶ ಮೂಲದ ಫಾತಿಮಾ ಬೇಗಂ ಎಂಬ ಯುವತಿಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಸಿಕ್ಕ ಸುಳಿವಿನ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ತೆಲಂಗಾಣದ ಚೆರ್ಲಾಪಲ್ಲಿಯಲ್ಲಿರುವ ಕಾರ್ಖಾನೆಯಿಂದ ಸಂಗ್ರಹಿಸಿದ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾಗಿ ಆಕೆ ಬಾಯಿಬಿಟ್ಟಿದ್ದಳು.
ದಾಳಿಯ ವೇಳೆ ಪೊಲೀಸರು ಹಾಗೂ ಮಾದಕ ದ್ರವ್ಯ ನಿಗ್ರಹ ಘಟಕದ ಅಧಿಕಾರಿಗಳು 32,000 ಲೀಟರ್ ಕಚ್ಚಾ ವಸ್ತುಗಳು ಹಾಗೂ 5,968 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಬಂಧಿಸಲಾಗಿದೆ. 4 ಕಾರು, ಒಂದು ದ್ವಿಚಕ್ರ ಹಾಗೂ 27 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಡ್ರಗ್ಸ್ ವಿರುದ್ಧದ ಸಮರದಲ್ಲಿ ಇದು ಅತೀ ದೊಡ್ಡ ಜಯವಾಗಿದ್ದು, ಇದರಿಂದ ರಾಜ್ಯದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.


