ನವದೆಹಲಿ: ಉಪ ರಾಷ್ಟ್ರಪತಿ ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಹಾಗೂ ತಮಿಳುನಾಡಿನ ಹಿರಿಯ ಬಿಜೆಪಿ ಮುಖಂಡ ಸಿಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.
ಜಗದೀಪ್ ಧಂಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸಿಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಸಿಪಿ ರಾಧಾಕೃಷ್ಣನ್ ಅವರಿಗೆ ೪೦ ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇದೆ. ಇದಕ್ಕೂ ಮುನ್ನ ಜಾರ್ಖಂಡ್ ರಾಜ್ಯಪಾಲರಾಗಿಯೂ ಹಾಗೂ ಹೆಚ್ಚುವರಿಯಾಗಿ ಪುದುಚೇರಿಯ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿದ್ದರು.
ಕೊಯಮತ್ತೂರಿನ ಎರಡು ಬಾರಿಯ ಲೋಕಸಭಾ ಸದಸ್ಯರಾಗಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸಿಪಿ ರಾಧಾಕೃಷ್ಣನ್ ಅವರ ನೇಮಕದ ಹಿಂದೆ ಬಿಜೆಪಿ ಸಾಕಷ್ಟು ಅಳೆದು ತೂಗಿ ಕಾರ್ಯ ತಂತ್ರ ರೂಪಿಸಿದ್ದು, ಹಲವು ಹಕ್ಕಿಗಳನ್ನು ಒಂದೇ ಕಲ್ಲಿನಲ್ಲಿ ಹೊಡೆಯುವ ತಂತ್ರವಾಗಿದೆ ಎಂದು ಹೇಳಿದರು.
ಉಪರಾಷ್ಟ್ರಪತಿ ಚುನಾವಣೆ ಗೆಲ್ಲುವ ಜೊತೆಗೆ ತಮಿಳುನಾಡು ಚುನಾವಣೆ ಮೇಲೆ ಕೂಡ ಬಿಜೆಪಿ ಕಣ್ಣೀಟ್ಟು ಈ ಆಯ್ಕೆ ಮಾಡಿದೆ. ಈ ಮೂಲಕ ತಮಿಳುನಾಡಿನಲ್ಲಿ ಖಾತೆ ತೆರೆಯಲು ಪರದಾಡುತ್ತಿರುವ ಬಿಜೆಪಿ ದ್ರಾವಿಡ ಪಕ್ಷಗಳ ವಿರುದ್ಧ ಮಾಸ್ಟರ್ ಸ್ಟ್ರೋಕ್ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕಡೆ ಡಿಎಂಕೆ ಪ್ರಬಲವಾಗಿದ್ದರೆ, ಮತ್ತೊಂದೆಡೆ ಜಯಲಲಿತಾ ಬಣದ ಪಳನಿಸ್ವಾಮಿ ಬಣ ಬಿಜೆಪಿ ಮೈತ್ರಿ ಮುರಿದುಕೊಂಡಿದೆ. ಮತ್ತೊಂದೆಡೆ ರಾಜಕೀಯ ಪಾದರ್ಪಣೆ ಮಾಡಿರುವ ನಟ ವಿಜಯ್ ಕೂಡ ಮುಂಬರುವ ವಿಧಾನಸಭೆಯ ಮೇಲೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಬಲ ಸ್ಪರ್ಧೆ ನಡೆಯುತ್ತಿರುವ ತಮಿಳುನಾಡು ಚುನಾವಣೆ ಮೇಲೆ ಬಿಜೆಪಿ ಈ ತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.
16ನೇ ವಯಸ್ಸಿ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರ್ಪಡೆಯಾಗಿದ್ದ ರಾಧಾಕೃಷ್ಣನ್ ಬಿಜೆಪಿ ಮತ್ತು ಜನಸಂಘದ ಸೈದ್ಧಾಂತಿಕ ನೆಲೆ ಹೊಂದಿದ್ದು, ಬಿಜೆಪಿಗೆ ಬಲ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.


