ಆಸ್ಪತ್ರೆಯಲ್ಲಿ ಯುವತಿಯನ್ನು ಯುವಕ ಕತ್ತು ಸೀಳಿ ಎಲ್ಲರ ಸಮ್ಮುಖದಲ್ಲಿ ಭೀಕರವಾಗಿ ಕೊಲೆ ಮಾಡುತ್ತಿದ್ದರೆ ವೈದ್ಯ ವೀಡೀಯೋ ಮಾಡುತ್ತಿದ್ದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನರಸಿಂಗ್ಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ 12ನೇ ತರಗತಿ ವಿದ್ಯಾರ್ಥಿನಿ ಸಂಧ್ಯಾ ಚೌಧರಿಯನ್ನು ಅಭಿಷೇಕ್ ಕೊಶಾಟಿ ಎಂಬಾತ ಕೊಲೆ ಮಾಡಿದ್ದಾನೆ.
ಆಸ್ಪತ್ರೆಯಲ್ಲಿ ಅಭಿಷೇಕ್ ಯುವತಿ ಕತ್ತು ಸೀಳಿ ನಿರಾಯಸವಾಗಿ ಕೊಲೆ ಮಾಡುತ್ತಿದ್ದರೆ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿ ಹಾಗೂ ಸಾರ್ವಜನಿಕರು ನೋಡುತ್ತಾ ನಿಂತಿದ್ದರು. ಕೆಲವರಂತೂ ರಕ್ತದ ಮಡುವಿನಲ್ಲಿ ಯುವತಿ ಒದ್ದಾಡುತ್ತಿದ್ದರೆ ಆಕೆಯ ಪಕ್ಕದಲ್ಲೇ ನಡೆದುಕೊಂಡು ಹೋಗಿದ್ದಾರೆ.
ಮನಸ್ಸನ್ನು ಕದಡುವ ಈ ಭೀಕರ ಘಟನೆ ಆಸ್ಪತ್ರೆಯಲ್ಲಿ ರಕ್ಷಣೆಯ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಕಾಕಿದೆ. ವೈದ್ಯರು ದೇವರ ಸಮಾನ ಅಂತಾರೆ ಆದರೆ ಒಬ್ಬ ವೈದ್ಯ ಕೊಲೆಯ ದೃಶ್ಯವನ್ನು ವೀಡಿಯೋ ಮಾಡಿದ್ದು, ಈ ವೀಡಿಯೋ ವೈರಲ್ ಆಗಿದೆ.
ಅಭಿಷೇಕ್ ಕೋಶ್ಟಿ ಸುಮಾರು 10 ನಿಮಿಷಗಳ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯನ್ನು ಕೊಂದ ಬಳಿಕ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅದು ವಿಫಲನಾಗಿ ಬೈಕ್ ನಲ್ಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಕೊಲೆ ನಡೆದ ಸಮಯದಲ್ಲಿ ಟ್ರಾಮಾ ಸೆಂಟರ್ ಹೊರಗೆ ಇಬ್ಬರು ಭದ್ರತಾ ಸಿಬ್ಬಂದಿ, ಒಳಗೆ, ವೈದ್ಯರು, ದಾದಿಯರು ಮತ್ತು ವಾರ್ಡ್ ಬಾಯ್ಸ್ ಸೇರಿದಂತೆ ಹಲವು ಸಿಬ್ಬಂದಿ ಇದ್ದರೂ ಯಾರೂ ಆತನನ್ನು ತಡೆಯಲಿಲ್ಲ.
ಮೃತ ಸಂಧ್ಯಾ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮನೆಯಿಂದ ಹೊರಟಿದ್ದು, ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ನಲ್ಲಿರುವ ಸ್ನೇಹಿತನ ಅತ್ತಿಗೆಯನ್ನು ಭೇಟಿಯಾಗುವುದಾಗಿ ಮನೆಯವರಿಗೆ ತಿಳಿಸಿ ಹೋಗಿದ್ದಳು.
ಅಭಿಷೇಕ್ ಮಧ್ಯಾಹ್ನದಿಂದ ಆಸ್ಪತ್ರೆಯ ಸುತ್ತಮುತ್ತ ಓಡಾಡುತ್ತಿದ್ದ. ಬಳಿಕ ಆಸ್ಪತ್ರೆ ಒಳಗೆ ಬಂದು ಆಕೆಯನ್ನು ನೆಲಕ್ಕೆ ಕೆಡವಿ, ಆಕೆಯ ಮೇಲೆ ಕುಳಿತು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಮೃತಳ ಕುಟುಂಬದವರಿಗೆ ಮಧ್ಯಾಹ್ನ 3.30ರ ಸುಮಾರಿಗೆ ಮಾಹಿತಿ ನೀಡಲಾಗಿದ್ದು, ಮನೆಯವರು ಘಟನಾ ಸ್ಥಳಕ್ಕೆ ಬಂದಾಗಲೂ ಶವ ಕೊಲೆಯಾದ ಜಾಗದಲ್ಲಿ ಹಾಗೆಯೇ ಇತ್ತು. ಆಘಾತಕಾರಿ ಘಟನೆ ಖಂಡಿಸಿ ಯುವತಿಯ ಕುಟುಂಬದವರು ರಾತ್ರಿ 10.30ರವರೆಗೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆದಿದ್ದಾರೆ.



