ಬೆಂಗಳೂರು ಸೇರಿದಂತೆ ದೇಶಾದ್ಯಂತದ ಪ್ರಮುಖ ಮಹಾನಗರಗಳಲ್ಲಿಇಂಡಿಗೋ ಏರ್‌ಲೈನ್ಸ್ ಸೇವೆಗಳು ಅಸ್ತವ್ಯಸ್ತಗೊಂಡಿದ್ದು, 1,000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಇದರಿಂದ ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಂಕಿಅಂಶಗಳ ಪ್ರಕಾರ, ಪರಿಶೀಲನಾ ಅವಧಿಯಲ್ಲಿ ಬರೋಬ್ಬರಿ 1,232 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈ ಬೃಹತ್ ಪ್ರಮಾಣದ ರದ್ದತಿಗಳಿಗೆ ಮುಖ್ಯವಾಗಿ ಎರಡು ಕಾರಣಗಳನ್ನು ನೀಡಲಾಗುತ್ತಿದೆ.
ಗುರುವಾರ ಆರಂಭವಾದ ವಿಮಾನ ಹಾರಾಟ ಸಮಸ್ಯೆ ಶುಕ್ರವಾರವೂ ಮುಂದುವರಿದಿದ್ದರಿಂದ ವಿದೇಶಿ ಪ್ರಯಾಣಕ್ಕಾಗಿ 2 ತಿಂಗಳು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಶುಕ್ರವಾರ ಒಂದೇ ದಿನ 200ಕ್ಕೂ ಅಧಿಕ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸದಾಗಿ ಜಾರಿಗೆ ಬಂದಿರುವ ವಿಮಾನ ಸಿಬ್ಬಂದಿಯ ಕಾರ್ಯಾವಧಿ ಮತ್ತು ವಿಶ್ರಾಂತಿ ಸಮಯಕ್ಕೆ ಸಂಬಂಧಿಸಿದ ನಿಯಮಗಳು ಕಠಿಣವಾದ ವಿಶ್ರಾಂತಿ ಅವಧಿಗಳನ್ನು ಕಡ್ಡಾಯಗೊಳಿಸಿವೆ ಮತ್ತು ರಾತ್ರಿ ಕಾರ್ಯಾಚರಣೆಗಳನ್ನು ಕಡಿಮೆಗೊಳಿಸಿವೆ. ಈ ನಿಯಮಗಳು ಇಂಡಿಗೋ ಕಾರ್ಯಾಚರಣೆಗೆ ತೀವ್ರ ಹಿನ್ನಡೆ ಉಂಟು ಮಾಡಿವೆ ಎಂದು ಹೇಳಲಾಗಿದೆ.
ವಿಮಾನ ಸಿಬ್ಬಂದಿ ಕೊರತೆ:
ವಿಮಾನಯಾನ ಸಂಸ್ಥೆಯು ಸಾಕಷ್ಟು ಸಂಖ್ಯೆಯ ಪೈಲಟ್‌ಗಳು ಮತ್ತು ಸಿಬ್ಬಂದಿಯನ್ನು ಹೊಂದಿಲ್ಲದಿರುವುದು ಕೂಡ ರದ್ದತಿಗೆ ಪ್ರಮುಖ ಕಾರಣವಾಗಿದೆ. ಏರ್‌ಲೈನ್ ಪೈಲಟ್‌ಗಳ ಸಂಘ ಸಹ ಈ ಕೊರತೆಗೆ ಹೊಸ FDTL ನಿಯಮಗಳೇ ಕಾರಣ ಎಂದು ದೂಷಿಸಿದೆ.
ಇಂಡಿಗೋ ಏರ್‌ಲೈನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣದಲ್ಲಿನ ವಾಯುಪ್ರದೇಶ ಮತ್ತು ಎಟಿಸಿ ಗೆ ಸಂಬಂಧಿಸಿದ ಸಮಸ್ಯೆಗಳು ತಮ್ಮ ನೇರ ನಿಯಂತ್ರಣಕ್ಕೆ ಮೀರಿದವು ಎಂದು ಹೇಳಿಕೊಂಡಿದೆ.
ಬೆಳಗಾವಿ ಪ್ರಯಾಣಿಕರ ಆಕ್ರೋಶ
ರಾಷ್ಟ್ರ ರಾಜಧಾನಿಯಾದ ನವದೆಹಲಿ ವಿಮಾನ ನಿಲ್ದಾಣದಲ್ಲಿಯೇ ಗುರುವಾರ ಬೆಳಿಗ್ಗೆ ಸುಮಾರು 30 ಇಂಡಿಗೋ ವಿಮಾನಗಳು ರದ್ದಾಗಿ, ಹಲವು ವಿಳಂಬಗೊಂಡಿದ್ದವು. ಈ ಅವ್ಯವಸ್ಥೆಯ ನೇರ ಪರಿಣಾಮ ಬೆಳಗಾವಿ ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ.
ಗುರುವಾರ ಬೆಳಿಗ್ಗೆ 5:50ಕ್ಕೆ ನವದೆಹಲಿಯಿಂದ ಹೊರಡಬೇಕಿದ್ದ ದೆಹಲಿ-ಬೆಳಗಾವಿ ಇಂಡಿಗೋ ವಿಮಾನವು ತೀವ್ರವಾಗಿ ವಿಳಂಬಗೊಂಡಿದೆ. ತಮ್ಮ ವಿಮಾನಕ್ಕಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಪ್ರಯಾಣಿಕರು ತಡವಾದ ಕಾರಣದಿಂದ ತೀವ್ರ ಅಸಮಾಧಾನ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದರು.
ಡಿಜಿಸಿಎ ತನಿಖೆ ಮತ್ತು ತಜ್ಞರ ಎಚ್ಚರಿಕೆ
ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡಿರುವ ಡಿಜಿಸಿಎ, ಇಂಡಿಗೋದ ಕಾರ್ಯಾಚರಣೆಯ ಲೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೆ, ವಿಮಾನ ರದ್ದತಿ ಮತ್ತು ವಿಳಂಬಗಳನ್ನು ಕಡಿಮೆ ಮಾಡಲು ಸೂಕ್ತ ಯೋಜನೆಗಳನ್ನು ಸಲ್ಲಿಸುವಂತೆ ಇಂಡಿಗೋ ಸಂಸ್ಥೆಗೆ ಸೂಚಿಸಿದೆ ಮತ್ತು ಅದರ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿದೆ.
ಏತನ್ಮುಖ, ಈ ಅಡಚಣೆಗಳ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದು, ನಡೆಯುತ್ತಿರುವ ಈ ಗೊಂದಲಗಳು ಹೊಸ ನಿಯಮಗಳನ್ನು ಜಾರಿಗೆ ತಂದ ಹಿಂದಿನ ಪ್ರಮುಖ ಸುರಕ್ಷತಾ ಉದ್ದೇಶಗಳಿಗೆ ಅಪಾಯವನ್ನುಂಟು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


