ಮೃತಪಟ್ಟಿದ್ದ ಪತ್ನಿಯ ಸೀರೆಯಿಂದ 5 ಮಕ್ಕಳಿಗೂ ನೇಣುಬಿಗಿದು ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಮೂರು ಹೆಣ್ಣು ಮಕ್ಕಳ ಜೊತೆ ತಂದೆ ಮೃತಪಟ್ಟಿದ್ದು, ಇಬ್ಬರು ಗಂಡು ಮಕ್ಕಳು ಪಾರಾದ ಘಟನೆ ಬಿಹಾರದಲ್ಲಿ ನಡೆದಿದೆ.
ಮುಜಾಫರ್ ನಗರದ ಮಿಸ್ಲೊರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಮರನಾಥ್ ರಾಮ್, ಹೆಣ್ಣು ಮಕ್ಕಳಾದ ಅನುರಾಧ (12), ಶಿವಾನಿ (7) ಮತ್ತು ರಾಧಿಕಾ (6) ಮೃತಪಟ್ಟಿದ್ದರೆ, ಗಂಡು ಮಕ್ಕಳಾದ ಶಿವಂ (6) ಮತ್ತು ಚಂದನ್ (5) ಸಾವಿನಿಂದ ಪಾರಾಗಿದ್ದಾರೆ.
ಅಮರನಾಥ್ ರಾಮ್ ಪತ್ನಿ ಕಳೆದ ವರ್ಷ ಮೃತಪಟ್ಟಿದ್ದು, ಮಕ್ಕಳನ್ನು ನೋಡಿಕೊಳ್ಳಲು ಆಗದೇ ಅಮರನಾಥ್ ಈ ದಾರಿ ಹಿಡಿದಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ದಿಕ್ಕುಗಳಿಂದಲೂ ತನಿಖೆ ನಡೆಸಲು ಮುಂದಾಗಿದ್ದಾರೆ.
ಅಡುಗೆ ಮನೆಯಲ್ಲಿ ಮೊಟ್ಟೆ ಬೇಯಿಸಿದ್ದು ಕಂಡು ಬಂದಿದ್ದು, ಆತ್ಮಹತ್ಯೆಗೂ ಮುನ್ನ ಅಮರನಾಥ್ ಮಕ್ಕಳಿಗೆ ಮೊಟ್ಟೆ ಮಾಡಿ ತಿನ್ನಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಟ್ರಂಕ್ ಮೇಲೆ ನಿಂತು ಎಲ್ಲರೂ ತಾಯಿಯ ಸೀರೆಯಿಂದ ನೇಣುಬಿಗಿದುಕೊಂಡಿದ್ದು, ಎಲ್ಲರೂ ಒಟ್ಟಿಗೆ ಟ್ರಂಕ್ ಮೇಲಿಂದ ಜಂಪ್ ಮಾಡೋಣ ಎಂದು ತಂದೆ ಹೇಳಿದ್ದಾನೆ. ಆತ ಹೇಳಿದಂತೆ ಎಲ್ಲರೂ ಜಿಗಿದಿದ್ದಾರೆ. ಆದರೆ ಇಬ್ಬರು ಮಕ್ಕಳು ಹಾರದೇ ಹಾಗೆ ನಿಂತಿದ್ದರಿಂದ ಅವರು ಪಾರಾಗಿದ್ದರೆ ಉಳಿದ ಎಲ್ಲರೂ ಮೃತಪಟ್ಟಿದ್ದಾರೆ.
ಬದುಕುಳಿದ ಪುತ್ರ ಶಿವಂ ಘಟನೆಯನ್ನು ವಿವರಿಸಿದ್ದು, ಅನಾಥರಾಗಿರುವ ಈ ಮಕ್ಕಳ ರಕ್ಷಣೆ ಕುರಿತು ಪೊಲೀಸರು ಸಿದ್ಧತೆ ನಡೆಸಿದ್ದಾರೆ.


