ಹೊಸ ವರ್ಷದ ಸಂಭ್ರಮ ಆಚರಿಸುವ ನೆಪದಲ್ಲಿ ತಾಯಿ ಹಾಗೂ ನಾಲ್ವರು ಸೋದರಿಯರಿಗೆ ಮದ್ಯ ಪೂರೈಸಿ ನಂತರ ಭೀಕರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಕ್ನೋದ ಖಾಸಗಿ ಹೋಟೆಲ್ ನಲ್ಲಿ ತಾಯಿ ಹಾಗೂ ತಂಗಿಯರಿಗೆ ಮದ್ಯ, ಆಹಾರ ಪೂರೈಸಿದ ಪುತ್ರ ಅರ್ಷದ್ ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರಕರಣ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತಪಟ್ಟ ಮಹಿಳೆಯರ ಕೈಗಳ ಮೇಲೆ ಗಾಯ, ತಿರುಚಿರುವುದು ಹಾಗೂ ಅವರ ಬಟ್ಟೆಗಳು ರಕ್ತಸಿಕ್ತವಾಗಿದ್ದನ್ನು ನೋಡಿದ್ದಾರೆ. ಮಹಿಳೆಯರಿಗೆ ಮದ್ಯ ಕುಡಿಸಿ ನಂತರ ಬ್ಲೇಡ್ ನಿಂದ ಕೈ ಮುಂತಾದ ಕಡೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾ ಮೂಲದ ಆಸ್ಮಾ ಹಾಗೂ 9,16, 18 ಮತ್ತು 19 ವಯಸ್ಸಿನ ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಮಗ ಕೊಲೆ ಮಾಡಿ ಸಿಕ್ಕಿಬಿದ್ದಿದ್ದರೆ ಘಟನೆ ನಡೆದಾಗ ಅದೇ ಹೋಟೆಲ್ ನಲ್ಲಿ ತಂಗಿದ್ದ ತಂದೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ೩೦ರಿಂದ ಕುಟುಂಬ ಲಕ್ನೋದ ಖಾಸಗಿ ಹೋಟೆಲ್ ನಲ್ಲಿ ತಂಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಕುಟುಂಬದಲ್ಲಿ ಮಾತಿನ ಚಕಮಕಿ ನಡೆದಿದ್ದು ನಂತರ ಯೋಜನೆ ರೂಪಿಸಿ ಹತ್ಯೆ ಮಾಡಲಾಗಿದೆ.
ಅರ್ಷದ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಮನೆಯ ಆಸ್ತಿಯ ಮೇಲೆ ಅಕ್ಕಪಕ್ಕದರ ಕಣ್ಣು ಬಿದ್ದಿದ್ದು, ಅಕ್ರಮವಾಗಿ ಜಾಗ ಮಾರಿ ತಾಯಿ ಹಾಗೂ ತಂಗಿಯರನ್ನು ಬೇರೆಡೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಆದ್ದರಿಂದ ಅವರನ್ನು ರಕ್ಷಿಸಲು ಹೀಗೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ಲಕ್ನೋ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ. ನಂತರ ಪ್ರಕರಣದ ತನಿಖೆಯ ದಿಕ್ಕನ್ನು ನಿರ್ಧರಿಸಲು ಪೊಲೀಸರು ಬಯಸಿದ್ದಾರೆ.