ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದ್ದು, ಸಂಸದೀಯ ಸಮಿತಿಗೆ ಶಿಫಾರಸು ಮಾಡಲಾಗಿದೆ.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸುವ ಸಾಂವಿಧಾನಿಕ 129ನೇ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮಂಡಲ್ ಮಂಡಿಸಿದ್ದು, ರಾಜ್ಯಗಳ ಅಧಿಕಾರ ಕಸಿಯುವುದಿಲ್ಲ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ನಡುವೆ ಕೆಲವು ಸಮಯ ಮಸೂದೆ ತರಾತುರಿಯಲ್ಲಿ ಜಾರಿಗೆ ತರುತ್ತಿರುವ ಬಗ್ಗೆ ವಾಗ್ವಾದ ನಡೆಯಿತು. ನಂತರ ಲೋಕಸಭೆಯಲ್ಲಿ ಧ್ವನಿಮತಕ್ಕೆ ಹಾಕಿದಾಗ ಮಸೂದೆ ಪರ 269 ಮತ್ತು ವಿರುದ್ಧವಾಗಿ 198 ಮತಗಳು ಬಿದ್ದವು.
ಲೋಕಸಭೆಯಲ್ಲಿ ಮೊದಲ ಹಂತದ ಜಯ ಸಾಧಿಸಿದ ಬಿಜೆಪಿಗೆ ಮಸೂದೆ ಪಾಸ್ ಮಾಡಿಸಬೇಕಾದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡು ಭಾಗದಷ್ಟು ಮತಗಳನ್ನು ಪಡೆಯಬೇಕಾಗಿದೆ. ಆದರೆ ಬಹುಮತದ ಕೊರತೆ ಇದ್ದರೂ ಮಸೂದೆ ಮಂಡನೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಒಂದು ದೇಶ, ಒಂದು ಚುನಾವಣೆ ಮಸೂದೆ ಇದೀಗ ಸಂಸದೀಯ ಸಮಿತಿ ಮುಂದೆ ಹೋಗಿದ್ದು, ಸಮಿತಿಯಲ್ಲಿ 31 ಸದಸ್ಯರು ಇದ್ದಾರೆ. ಇದರಲ್ಲಿ 21 ಮಂದಿ ಲೋಕಸಭಾ ಸಂಸದರು ಇರುತ್ತಾರೆ. ವರದಿ ಸಲ್ಲಿಕೆಗೆ 90 ದಿನಗಳ ಅವಕಾಶ ನೀಡಲಾಗಿದ್ದು, ಅಗತ್ಯಬಿದ್ದರೆ ಮಾತ್ರ ಕಾಲವಕಾಶ ವಿಸ್ತರಿಸಬಹುದಾಗಿದೆ.
ಸಂಸದೀಯ ಸಮಿತಿ ಅಗತ್ಯಬಿದ್ದರೆ ಕೇಂದ್ರ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಮಾಹಿತಿ ತರಿಸಿಕೊಳ್ಳಬಹುದಾಗಿದೆ. ಈ ಬಾರಿ ಬಿಜೆಪಿ ಲೋಕಸಭಾ ಮತ್ತು ರಾಜ್ಯಸಭೆ ಸ್ಪೀಕರ್ ಗಳ ಸಲಹೆಯನ್ನು ಪಡೆಯುವ ಅವಕಾಶ ನೀಡಲಿದೆ.
ಅತ್ಯಂತ ಮಹತ್ವದ ಮಸೂದೆ ಜಾರಿಗೆ ತರುವಾಗ ಸಾಕಷ್ಟು ಸಂಖ್ಯಾಬಲ ಇದ್ದಾಗ ಮಾಡಬೇಕು. ಆದರೆ ಮೂರನೇ ಎರಡು ಭಾಗದಷ್ಟು ಮತ ಪಡೆಯಲು ಸಾಧ್ಯವಿಲ್ಲದೇ ಇದ್ದರೂ ಈ ಮಸೂದೆ ಮಂಡನೆಗೆ ಮುಂದಾದರೆ ದೀರ್ಘಕಾಲ ಆರೋಪಗಳನ್ನು ಎದುರಿಸಬೇಕು. ಮತ್ತು ಇದರಿಂದ ದೊಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.