ನವದೆಹಲಿ: ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ಹಾರುತ್ತಿದ್ದಾಗಲೇ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲೆಟ್ ಮೃತಪಟ್ಟಿದ್ದಾರೆ.
ಬೆಂಗಳೂರಿನ ಹೆಚ್‌ಎಎಲ್ ನಿರ್ಮಿತ ಸಿಂಗಲ್ ಸೀಟ್ ಇಂಜಿನ್ ಹೊಂದಿರುವ ಲಘು ಯುದ್ಧ ವಿಮಾನ ಶುಕ್ರವಾರ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗ ಪತನಗೊಂಡಿದೆ. ಕಳೆದ 25 ವರ್ಷಗಳಲ್ಲಿ ತೇಜಸ್ ವಿಮಾನ ಪತನಗೊಂಡಿರುವ ಎರಡನೇ ಪ್ರಕರಣ ಇದಾಗಿದೆ.
ವಿಮಾನದಲ್ಲಿದ್ದ ಪೈಲೆಟ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರ ಕಣ್ಣೆದುರಿನಲ್ಲಿ ಈ ದುರಂತ ಸಂಭವಿಸಿದ್ದು, ವಿಮಾನ ಪತನಗೊಂಡ ಕೂಡಲೇ ದೊಡ್ಡ ಸ್ಫೋಟ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು.
- ತಾಂತ್ರಿಕ ದೋಷದಿಂದ ಆಗಿದೆಯೇ? ಅಥವಾ ಪೈಲಟ್‌ನ ದೋಷದಿಂದ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತಂತ್ರಜ್ಞರ ತಂಡ ಸ್ಥಳಕ್ಕೆ ಧಾವಿಸಿದ್ದು, ವಾಯುಪಡೆ ನ್ಯಾಯಂಗ ತನಿಖೆಗೆ ಆದೇಶಿಸಿದೆ.


