ಮಹಿಳಾ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಗುಟ್ಟಾಗಿ ಮದುವೆ ಆಗಿದ್ದ ಪೊಲೀಸ್ ಪೇದೆಯಿಂದಲೇ ಕಗ್ಗೊಲೆಯಾದ ಘಟನೆ ಓಡಿಶಾದ ರಾಜಧಾನಿ ಭುವನೇಶ್ವರದಲ್ಲಿ ನಡೆದಿದೆ.
ಜಗತ್ಸಿಂಗ್ ಪುರ ಜಿಲ್ಲೆಯ ಪರದೀಪ್ ನಿವಾಸಿಯಾಗಿದ್ದ ಭುವನೇಶ್ವರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಂಚಾರಿ ಪೊಲೀಸ್ ಕಾನ್ ಸ್ಟೇಬಲ್ ಸುಭಮಿತ್ರಾ ಸಾಹೋ ಕೊಲೆಯಾಗಿದ್ದು ಕಿಯೊಂಜರ್ ಜಿಲ್ಲೆಯ ಕಾಡಿನಲ್ಲಿ ಅನಾಥ ಶವವಾಗಿ ಪತ್ತೆಯಾಗಿದ್ದರು.
ದೀಪಕ್ ರೌತ್ ಕೂಡ ಅದೇ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದು, ಸುಭಮಿತ್ರಾ ಸಾಹೋ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಗತ್ಸಿಂಗ್ ಪುರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಭಮಿತ್ರಾ ಸಾಹೋ ಇತ್ತೀಚೆಗೆ ಭುವನೇಶ್ವರದ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸೆಪ್ಟೆಂಬರ್ 6ರಂದು ಎಂದಿನಂತೆ ಕರ್ತವ್ಯ ನಿಭಾಯಿಸಲು ಮನೆಯಿಂದ ಹೊರಗೆ ಹೋದವರು ವಾಪಸ್ ಮರಳಿರಲಿಲ್ಲ.
ಮಗಳು ಮನೆಗೆ ಬಂದಿಲ್ಲ ಎಂದು ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸುವ ವೇಳೆ ಪೊಲೀಸರಿಗೆ 2024ರಲ್ಲಿ ಸಾಹೋ ಮತ್ತು ದೀಪಕ್ ರೌತ್ ಗುಟ್ಟಾಗಿ ಮದುವೆ ಆಗಿರುವುದು ತಿಳಿದು ಬಂದಿತು.
ಮಹಿಳಾ ಟ್ರಾಫಿಕ್ ಪೊಲೀಸ್ ಕಾಣೆಯಾದ ದಿನದ ಮೊಬೈಲ್ ಚಾಟ್ ಹಾಗೂ ಲೋಕೇಷನ್ ಆಧಾರದ ಮೇಲೆ ಪ್ರಥಮ ಅನುಮಾನದ ವ್ಯಕ್ತಿಯಾದ ದೀಪಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯನ್ನು ಒಪ್ಪಿಕೊಂಡಿದ್ಧಾನೆ.
ಸೆಪ್ಟೆಂಬರ್ 6ರಂದು ಮಧ್ಯಾಹ್ನ 2 ಗಂಟೆಗೆ ತನ್ನದೇ ಕಾರಿನಲ್ಲಿ ಆಕೆಯನ್ನು ಪೊಲೀಸ್ ಠಾಣೆಯಿಂದ ಕರೆದುಕೊಂಡು ಹೋಗಿದ್ದು, ಕತ್ತು ಕೊಯ್ದು ಕೊಲೆ ಮಾಡಿ ಭುವನೇಶ್ವರದಿಂದ 170 ಕಿ.ಮೀ. ದೂರದ ಘಾಟಾಗೋನ್ ಕಾಡಿನಲ್ಲಿ ಶವವನ್ನು ಸುಟ್ಟುಹಾಕಿದ್ದಾಗಿ ದೀಪಕ್ ವಿಚಾರಣೆ ವೇಳೆ ಹೇಳಿದ್ದಾರೆ.
ದೀಪಕ್ ಸುಮಾರು 1 ಕೋಟಿ ರೂ. ಸಾಲ ಮಾಡಿದ್ದು, ಸಾಹೋ ಬಳಿ 10 ಲಕ್ಷ ರೂ. ಪಡೆದಿದ್ದ. ಆಕೆ ಗುಟ್ಟಾಗಿ ಆಗಿದ್ದ ಮದುವೆಯನ್ನು ಸಮಾರಂಭ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲು ಹಣ ವಾಪಸ್ ಕೊಡುವಂತೆ ಪದೇಪದೆ ಒತ್ತಾಯಿಸುತ್ತಿದ್ದಳು. ಆದರೆ ದೀಪಕ್ ಹಣ ನೀಡುವ ಬದಲು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ ಆಕೆ ಕೇಳದ ಕಾರಣ ಕೊಲೆ ಮಾಡಿದ್ದಾಗಿ ವಿವರಿಸಿದ್ದಾನೆ.
ಪ್ರಕರಣದ ಕುರಿತು ನಮಗೆ ಮಾಹಿತಿ ಸಿಕ್ಕಿದ್ದರೂ ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ. ಅಲ್ಲದೇ ಗುಟ್ಟಾಗಿ ಮದುವೆ ಆದ ಬಗ್ಗೆಯೂ ದಾಖಲೆಗಳಿಲ್ಲ. ಆದ್ದರಿಂದ ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


