ಬಿಜೆಪಿ ಹಿರಿಯ ನಾಯಕ ಹಾಗೂ 5 ಬಾರಿಯ ಸಂಸದ ವಿಜಯ್ ಮಲ್ಹೋತ್ರಾ ವಯೋಸಹಜವಾಗಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಮಲ್ಹೋತ್ರಾ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ವಿಜಯ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 8.45ರ ಸುಮಾರಿಗೆ ಅವರ ಅಧಿಕೃತ ನಿವಾಸಕ್ಕೆ ಕರೆತಂದು ಬಳಿಕ ಗುರುದ್ವಾರ ರಕಬ್ಗಂಜ್ ರಸ್ತೆಯಲ್ಲಿ ಅಂತಿಮ ನಮನ ಸಲ್ಲಿಸಲು ತರಲಾಗುವುದು ಎಂದು ಬಿಜೆಪಿ ಮಾಹಿತಿ ನೀಡಿದೆ.
5 ಬಾರಿಯ ಸಂಸದ ಹಾಗೂ 2 ಬಾರಿಯ ಶಾಸಕರಾಗಿದ್ದ ವಿಜಯ್ ಮಲ್ಹೋತ್ರಾ 1999ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಮಣಿಸಿದ್ದರು. ಅಲ್ಲದೇ 2004ರಲ್ಲಿ ಬಿಜೆಪಿ ದೆಹಲಿಯಲ್ಲಿ ಗೆದ್ದ ಏಕೈಕ ಅಭ್ಯರ್ಥಿ ವಿಜಯ್ ಮಲ್ಹೋತ್ರಾ ಆಗಿದ್ದರು.
ದೆಹಲಿ ಬಿಜೆಪಿ ಅಧ್ಯಕ್ಷರಾಗಿದ್ದ ವಿಜಯ್ ಮಲ್ಹೋತ್ರಾ 4 ದಶಕಗಳ ಕಾಲ ಬಿಜೆಪಿ ದೆಹಲಿಯಲ್ಲಿ ಗೆಲುವು ಕಾಣಲು ಪ್ರಮುಖ ಕಾರಣರಾಗಿದ್ದರು. ವಿಜಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಗಣ್ಯರು ಶೋಕ ವ್ಯಕ್ತಪಡಿಸಿದ್ದು, ದೆಹಲಿಯ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.


