ಬೆಂಗಳೂರು: ಹುಬ್ಬಳ್ಳಿ ಧಾರವಾಡ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಮಹಾನಗರ ಪಾಲಿಕೆ ಪರಿವರ್ತನೆಯಾದ ನಂತರ ಧಾರವಾಡ ನಗರದ ಮಹಾನಗರ ಪಾಲಿಕೆಯಲ್ಲಿ 2,75,339 ಜನಸಂಖ್ಯೆ ಮತ್ತು ಒಟ್ಟಾರೆ ವಿಸ್ತೀರ್ಣ 120.94 ಚ.ಕಿ.ಮೀ ಹಾಗೂ ಜನಸಾಂದ್ರತೆಯು 2277 ಇದೆ. ಹುಬ್ಬಳ್ಳಿ ಮಹಾನಗರ ಪಾಲಿಕೆಯ ಜನಸಂಖ್ಯೆಯು 6,68,449 ಮತ್ತು ಒಟ್ಟಾರೆ ವಿಸ್ತೀರ್ಣ 127.05 ಕಿ.ಮೀ. 5261 ಜನಸಾಂದ್ರತೆ ಇದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರಸ್ತುತವಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ.1 ರಿಂದ 26 ಅನ್ನು ಒಳಗೊಂಡಂತೆ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲಾಗುತ್ತದೆ.
ಇನ್ನೂಳಿದ ವಾರ್ಡ್ ನಂ.27 ರಿಂದ 82 ರವರೆಗಿನ ಪ್ರದೇಶಗಳನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನಾಗಿ ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಬಂದರಿಗೆ ಅನುಮೋದನೆ:
ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ 209.13 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೇಂದ್ರ ಪುರಸ್ಕೃತ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣಾ ಹೂಳೆತ್ತುವಿಕೆಯ ಕಾಮಗಾರಿಗಳ 84.57 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
5 ಸಾವಿರ ಕೋಟಿ ಹೆಚ್ಚಳ:
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿ ಪ್ರಸ್ತುತ ರೂ. 500 ಕೋಟಿ ಗಳಿದ್ದು, ಅದನ್ನು ರೂ. 5000 ಕೋಟಿಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ವಡಗನಹಳ್ಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜಿನ ಕಟ್ಟಡ ಕಾಮಗಾರಿಗಳನ್ನು 149.75 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಿಯಾಯಿತಿ ದರದಲ್ಲಿ ನಿವೇಶನ:
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಯಕ ವಿದ್ಯಾರ್ಥಿ ನಿಲಯ, ದಾವಣಗೆರೆ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 523.99 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23 ಸಾಲಿನ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ ರೂ. 56.92 ಕೋಟಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿನಿಲಯಗಳಿಗೆ ಬೆಡ್ ಶೀಟ್, ಸೊಳ್ಳೆ ಪರದೆಗಳು, ಟ್ರಾಕ್ ಸೂಟ್ ಮತ್ತು ನೈಟ್ ಡ್ರೆಸ್‌ಗಳ ಸಾಮಗ್ರಿಗಳನ್ನು ಪೂರೈಸಲು ಆಡಳಿತಾತ್ಮಕ ಅನುಮೋದನೆ.
ಬನ್ನಿ ಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪನೆಗೆ ಸಂಪುಟ ಅಸ್ತು ನೀಡಿದ್ದು, 120 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದರು.
ಸಂಭ್ರಮಾಚರಣೆ
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಸಂಭ್ರಮಾಚರಣೆ ನಡೆದಿದೆ. ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ.2
014ರಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಧಾರವಾಡದ ಜನಸಂಖ್ಯೆ 6.5 ಲಕ್ಷ ದಾಟಿರುವುದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಧಾರವಾಡದ ಜನರು ಆಗ್ರಹಿಸಿದ್ದರು.
ಪಾಲಿಕೆಯ ರಚನೆಗೆ 3.5 ಲಕ್ಷ ಜನಸಂಖ್ಯೆಯ ಮೇಲಿರಬೇಕು. ಹೀಗಾಗಿ, ಇದೀಗ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಘೋಷಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ