ನವದೆಹಲಿ: ತನ್ನ ತೆರಿಗೆ ಮೂಲದ ಆದಾಯದಲ್ಲಿ ರಾಜ್ಯಕ್ಕೆ ನೀಡುವ ಪಾಲನ್ನು ಕಡಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಈ ಮೂಲಕ ರಾಜ್ಯಗಳ ಪಾಲಿಗೆ ಮತ್ತೊಂದು ಬರಸಿಡಿಲು ಇಷ್ಟರಲ್ಲಿಯೇ ಬಡಿಯಲಿದೆ.
ಸಾಂವಿಧಾನಿಕವಾಗಿ ನೇಮಕಗೊಂಡ ಭಾರತದ ಹಣಕಾಸು ಆಯೋಗ ನೀಡಿರುವ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೆನ್ನಲಾಗಿದೆ. ಇದರ ಶಿಫಾರಸಿನಂತೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಂಬಂಧ ಇನ್ನಷ್ಟು ಬಿಗಡಾಯಿಸಬಹುದು. ಜತೆಗೆ ಕೇಂದ್ರ ಮತ್ತು ರಾಜ್ಯಗಳ ಸಂಘರ್ಷ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.
ಆರ್ಥಿಕ ತಜ್ಞ ಅರವಿಂದ ಪನಾಗರಿಯಾ ಅವರ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಅ.31ರಂದು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಇದನ್ನು 2026-27ನೇ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ಅಳವಡಿಸಿಕೊಳ್ಳಲು ಶಿಫಾರಸು ಮಾಡಿದೆ. ಈ ಶಿಫಾರಸಿನಂತೆ ಸದ್ಯ ಇರುವ ಶೇ.41ರಷ್ಟು ಪಾಲನ್ನು ಶೇ.40ಕ್ಕೆ ತಗ್ಗಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.
`ಮುಂದಿನ ವರ್ಷದ ತೆರಿಗೆ ಸಂಗ್ರಹವನ್ನು ಗಮನದಲ್ಲಿಟ್ಟುಕೊಂಡು ಈ ಶೇ.1ರಷ್ಟು ಕಡಿತ ಮಾಡುವುದರಿಂದ ಕೇಂದ್ರ ಸರ್ಕಾರದ ಆದಾಯ ?೩೫೦ ಶತಕೊಟಿಯಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಇದು ಆಯಾ ವರ್ಷದಲ್ಲಿ ಸಂಗ್ರಹವಾಗುವ ತೆರಿಗೆ ಪಾಲನ್ನು ಆಧರಿಸಿರುತ್ತದೆ. ಮಾರ್ಚ್ ಅಂತ್ಯದ ಹೊತ್ತಿಗೆ ಕೇಂದ್ರ ಸಚಿವ ಸಂಪುಟವು ಈ ಶಿಫಾರಸನ್ನು ಅಂಗೀಕರಿಸುವ ಸಾಧ್ಯತೆ ಇದ್ದು, ನಂತರ ಇದನ್ನು ಹಣಕಾಸು ಆಯೋಗಕ್ಕೆ ಕಳುಹಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
ತೆರಿಗೆಯ ಪಾಲಿನಲ್ಲಿ ರಾಜ್ಯಗಳಿಗೆ ಹಂಚಿಕೆಯಾಗುವ ಹಣದ ಪ್ರಮಾಣವು 1980ರಲ್ಲಿ ಶೇ 20ರಷ್ಟಿತ್ತು. ಇದೀಗ ಅದು ಶೇ 41ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರದ ವೆಚ್ಚದ ಪ್ರಮಾಣವೂ ಏರಿಕೆಯಾಗಿದೆ. ಇದರಿಂದ ರಾಜ್ಯದ ಪಾಲನ್ನು ತಗ್ಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದೆನ್ನಲಾಗಿದೆ.
2024-25ರಲ್ಲಿ ದೇಶದ ವಿತ್ತೀಯ ಕೊರತೆಯು ದೇಶದ ಜಿಡಿಪಿಯ ಶೇ 4.8ರಷ್ಟಿತ್ತು. ಮತ್ತೊಂದೆಡೆ ರಾಜ್ಯಗಳ ವಿತ್ತೀಯ ಕೊರತೆ ಶೇ.3.2ರಷ್ಟಿದೆ. ಸರ್ಕಾರದ ಒಟ್ಟು ಹಣ ವಿನಿಯೋಗದಲ್ಲಿ ರಾಜ್ಯಗಳ ಪಾಲು ಶೇ.60ರಷ್ಟಿದೆ. ಇವುಗಳ ಬಹುತೇಕ ಹಣವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ತನ್ನ ಭೌತಿಕ ಮೂಲಸೌಕರ್ಯಗಳ ಮೇಲೆ ವ್ಯಯಿಸುತ್ತಿದೆ’ ಎಂದು ಅಂದಾಜಿಸಲಾಗಿದೆ.
2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ರಾಜ್ಯಗಳ ಆದಾಯ ಪ್ರಮಾಣ ಏರಿಕೆಯಾಗಿಲ್ಲ. ಕೋವಿಡ್ ನಂತರ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಶೇ 9ರಿಂದ 12ರಷ್ಟಿದ್ದ ಈ ತೆರಿಗೆಯು ನಂತರ ಶೇ.15ಕ್ಕೆ ಹೆಚ್ಚಳವಾಯಿತು. ಆದರೆ ಇದರಲ್ಲಿ ರಾಜ್ಯಗಳಿಗೆ ಯಾವುದೇ ಪಾಲು ಇಲ್ಲ.
`ರಾಜ್ಯಗಳ ಆದಾಯ ಹೆಚ್ಚಿಸಲು ಉಚಿತವಾಗಿ ನೀಡುವ ಹಣ, ಸಾಲ ಮನ್ನಾ ಹಾಗೂ ಇನ್ನಿತರ ರಾಜಕೀಯ ಲಾಭಕ್ಕಾಗಿ ನೀಡುವ ಕೊಡುಗೆಗಳನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರ ನಿರ್ದೇಶಿಸುವ ಸಾಧ್ಯತೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.


