ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಶುಕ್ರವಾರ ಸಂಭವಿಸಿದೆ.
ಪೂರ್ಣಿಯಾದಲ್ಲಿ ಶುಕ್ರವಾರ ಬೆಳಿಗ್ಗೆ ಜೋಗಬಾನಿಯಿಂದ ಪಾಟಲಿಪುತ್ರಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಪೂರ್ಣಿಯಾ ಪಟ್ಟಣದ ಬಳಿ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಮೃತಪಟ್ಟಿದ್ದಾರೆ.
ಮೇಳವೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಮರಳುತ್ತಿದ್ದ ಗುಂಪಿನ ಮೇಲೆ ರೈಲು ಹರಿದು ಹೊಡೆದಿದೆ. ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಕ್ರಾಸಿಂಗ್ ಸಿಬ್ಬಂದಿಯ ನಿರ್ಲಕ್ಷ್ಯವೋ? ಅಥವಾ ಜನರು ಹೈಸ್ಪೀಡ್ ರೈಲನ್ನು ನಿರ್ಲಕ್ಷಿಸಿ ಕ್ರಾಸಿಂಗ್ ದಾಟಲು ಪ್ರಯತ್ನಿಸಿದ್ದರೋ? ಎಂಬುದರ ಕುರಿತು ಮಾಹಿತಿ ತಿಳಿದುಬರಬೇಕಿದೆ. ಸದ್ಯ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


