ಸಮೋಸಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಮಹಿಳೆಯೊಬ್ಬರು ಖಡ್ಗದಿಂದ ಕತ್ತರಿಸಿ ವೃದ್ಧ ರೈತನನ್ನು ಕೊಂದ ಘಟನೆ ಬಿಹಾರದ ಬೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಕೌಲುದಿಹಾರಿ ಗ್ರಾಮದ ನಿವಾಸಿ ಚಂದ್ರಮ ಯಾದವ್ ಕೊಲೆಯಾದ ವೃದ್ಧ. ಭಾನುವಾರ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯಾದವ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ.
ಸಮೋಸಾ ಖರೀದಿಗಾಗಿ ಬಾಲಕನೊಬ್ಬ ಅಂಗಡಿಗೆ ತೆರಳಿದ್ದ. ಈ ವೇಳೆ ಸಮೋಸಾಗಾಗಿ ಮಕ್ಕಳ ನಡುವೆ ಜಗಳ ಆರಂಭವಾಗಿದ್ದು, ಇತರೆ ಮಕ್ಕಳು ಸಮೋಸಾ ಕಸಿದುಕೊಂಡರು. ಇದನ್ನೆಲ್ಲಾ ನೋಡುತ್ತಿದ್ದ ಚಂದ್ರಮಾ ಯಾದವ್ ಅಂಗಡಿಗೆ ತೆರಳಿ ಗಲಾಟೆಗೆ ಕಾರಣ ಏನೆಂದು ವಿಚಾರಿಸಿ ಬಗೆಹರಿಸಲು ಪ್ರಯತ್ನಿಸಿದ. ಆದರೆ ವಿಷಯ ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗಿದೆ.
ಗಲಾಟೆ ವಿಕೋಪಕ್ಕೆ ತಿರುಗಿದ್ದರಿಂದ ಮಹಿಳೆಯೊಬ್ಬರು ಖಡ್ಗದಿಂದ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಹಿಳೆ ಇದೀಗ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.


