ಪ್ರತಿಭಟನೆ ತೀವ್ರ ಪಡೆದು 105 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ದೇಶಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸೇನೆ ನಿಯೋಜಿಸಿದೆ.
ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ವಿಕೋಪಕ್ಕೆ ತೆರಳುತ್ತಿದ್ದು, ದೇಶದೆಲ್ಲೆಡೆ ಹಬ್ಬುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆಯಿಂದ 105ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2500ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಕೆಲವು ದಿನಗಳಿಂದ ತೀವ್ರ ಸ್ವರೂಪ ಪಡೆದಿದ್ದು, ಶುಕ್ರವಾರ ಪ್ರತಿಭಟನಾಕಾರರು ಜೈಲಿಗೆ ನುಗ್ಗಿ ಬೆಂಕಿ ಹಚ್ಚಿದ್ದರಿಂದ ನೂರಾರು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಾಧ್ಯಮ ಕಾರ್ಯದರ್ಶಿ ನಯೀಮುಲ್ ಇಸ್ಲಾಂ ಖಾನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಸರ್ಕಾರ ದೇಶಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಿದೆ. ಅಲ್ಲದೇ ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.