ಮನೋಹರ್ ಲಾಲ್ ಖಟ್ಟಾರ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹಿರಿಯ ನಾಯಕ ನಯಾಬ್ ಸಿಂಗ್ ಸೈನಿ ಆಯ್ಕೆಯಾಗಿದ್ದು, ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಹಾಗೂ ಅವರ ಸಚಿವ ಸಂಪುಟದ ಎಲ್ಲಾ ಸಹದ್ಯೋಗಿಗಳು ಮಾರ್ಚ್ 11ರಂದು ದಿಢೀರನೆ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಬಂದರು ದತ್ತಾತ್ರೇಯ ಅವರಿಗೆ ಸಲ್ಲಿಸಿದ್ದರು.
ಮನೋಹರ್ ಲಾಲ್ ರಾಜೀನಾಮೆ ಬೆನ್ನಲ್ಲೇ ಮಂಗಳವಾರ ಬೆಳಿಗ್ಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಯಾಬ್ ಸಿಂಗ್ ಸೈನಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಂತರ ರಾಜ್ಯಪಾಲರಿಗೆ ಅಧಿಕಾರ ಹಕ್ಕು ಮಂಡನೆ ನಡೆಯಿತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಬಿಜೆಪಿ ಹಾಗೂ ಜನನಾಯಕ ಜನತಾಪಾರ್ಟಿ ಪಕ್ಷದ ಮೈತ್ರಿಯಲ್ಲಿ ಬಿರುಕು ಕಂಡು ಬಂದಿದ್ದು, ಬಿಜೆಪಿ ಮೈತ್ರಿ ಮುರಿದುಕೊಂಡು ಏಕಾಂಗಿಯಾಗಿ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿಂದಿನ ಖಟ್ಟಾರ್ ಸರ್ಕಾರದಲ್ಲಿ ಜನನಾಯಕ ಜನತಾ ಪಾರ್ಟಿ ಭಾಗವಾಗಿತ್ತು.
54 ವರ್ಷದ ನಯಾಬ್ ಸಿಂಗ್ ಸೈನಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಕುರುಕ್ಷೇತ್ರ ಕ್ಷೇತ್ರದಿಂದ ಸಂಸದರಾಗಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.