ಬಜೆಟ್ ಮಂಡಿಸುವ ವೇಳೆ ದೇಶದ ಎಲ್ಲಾ ರಾಜ್ಯಗಳ ಹೆಸರು ಹೇಳಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ವೇಳೆ ಕೇಂದ್ರ ಸರ್ಕಾರ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದ್ದು, ದಕ್ಷಿಣ ಭಾರತ ರಾಜ್ಯಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿ ಕಲಾಪವನ್ನು ಬಹಿಷ್ಕರಿಸಿದವು.
ನಂತರ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಹಲವಾರು ಬಾರಿ ಬಜೆಟ್ ಮಂಡಿಸಿದೆ. ವಿವಿಧ ರೀತಿಯ ಬಜೆಟ್ ಕೂಡ ಮಂಡಿಸಿದೆ. ಇಷ್ಟು ಅನುಭವ ಇರುವ ಕಾಂಗ್ರೆಸ್ ಗೆ ಬಜೆಟ್ ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಉಲ್ಲೇಖಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಅರಿವು ಇಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಕೇವಲ ಆಂಧ್ರಪ್ರದೇಶ, ಬಿಹಾರ ಮತ್ತು ಕೆಲವು ರಾಜ್ಯಗಳಿಗಷ್ಟೇ ಹೆಚ್ಚಿನ ಅನುದಾನ ನೀಡಲಾಗಿದೆ. ಉಳಿದ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನೋಡುತ್ತಿದ್ದು, ಯಾವುದೇ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಹಾರಾಷ್ಟ್ರದಲ್ಲಿ ವಾದವನ್ ಯೋಜನೆಗಾಗಿ 76 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಆ ರಾಜ್ಯವನ್ನು ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಆ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂಬ ಅರ್ಥವೇ? ಪ್ರತಿಪಕ್ಷಗಳು ಆರೋಪ ಮಾಡಿದ ಮೇಲೆ ನಮ್ಮ ಉತ್ತರ ಕೇಳುವಷ್ಟು ಸೌಜನ್ಯ ಇಲ್ಲದೇ ಸಭೆ ಬಹಿಷ್ಕರಿಸಿದ್ದು ವಿಪರ್ಯಾಸ ಎಂದು ಅವರು ಹೇಳಿದರು.