ನೋ ಇಂಗ್ಲೀಷ್, ನೋ ಹಿಂದಿ.. ಓನ್ಲಿ ಕನ್ನಡ ಅಂತ ಹೊರರಾಜ್ಯದಿಂದ ಬಂದ ಅನ್ಯಭಾಷಿಗರಾದ ನಮ್ಮನ್ನು ಬೆಂಗಳೂರಿನಲ್ಲಿ ಎಲ್ಲರೂ ಕಾಡುತ್ತಾರೆ ಎಂದು ಉತ್ತರ ಭಾರತದ ಮಹಿಳೆಯೊಬ್ಬಳು `ಎಕ್ಸ್’ನಲ್ಲಿ ಸರಣಿ ಪೋಸ್ಟ್ ಮೂಲಕ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@shaaninani ಹೆಸರಿನ ಖಾತೆ ಹೊಂದಿರುವ ಮಹಿಳೆಯೊಬ್ಬರು ಸರಣಿ ಪೋಸ್ಟ್ ಗಳ ಮೂಲಕ ಬೆಂಗಳೂರಿನಲ್ಲಿ ಆಗಿರುವ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಾನು ಬೆಂಗಳೂರಿನಲ್ಲಿ ಒಂದೂವರೆ ವರ್ಷದಿಂದ ಇದ್ದೇನೆ. ಹೊಸದಾಗಿ ಮದುವೆ ಆಗಿರುವ ನಾನು ಕೆಲಸದ ಮೇಲೆ ಬೆಂಗಳೂರಿನಲ್ಲಿ ನೆಲೆಸಿದ್ದೆ. ನಮ್ಮ ಸಂಪ್ರದಾಯದ ಪ್ರಕಾರ `ಚೋರಾ’ ಧಿರಿಸು ಹಾಕಿಕೊಂಡೇ ಓಡಾಡುತ್ತಿದೆ. ಆದರೆ ಸಿಲಿಕಾನ್ ಸಿಟಿ ಆಫ್ ಇಂಡಿಯಾ ಎಂದು ಕರೆಯುವ ಬೆಂಗಳೂರಿನಲ್ಲಿ ನನಗೆ ಭಾಷೆ ಬರಲ್ಲ ಎಂದು ಎಲ್ಲರೂ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
ನನ್ನ ಉಡುಪು ನೋಡಿಯೇ ನಾನು ಹೊರ ರಾಜ್ಯದವಳು ಎಂದು ಹೇಳಬಹುದು. ನಾನು ಪ್ರತಿದಿನ ಕೆಲಸಕ್ಕೆ ಹೋಗುವಾಗ ಮತ್ತು ಬರುವಾಗ ಇದರಿಂದ ತುಂಬಾ ಕಿರಿಕಿರಿ ಅನುಭವಿಸಿದ್ದೇನೆ. ಆಟೋದವರು ನನಗೆ ಕನ್ನಡ ಬರಲ್ಲ ಎಂಬ ಕಾರಣಕ್ಕೆ ಹೆಚ್ಚು ಹಣ ಕೇಳುತ್ತಿದ್ದರು. ಅಲ್ಲದೇ ಸಮರ್ಪಕವಾಗಿ ಉತ್ತರ ಕೊಡುತ್ತಿರಲಿಲ್ಲ. ಏನಾದರೂ ಪ್ರಶ್ನೆ ಮಾಡಲು ಹೋದರೆ ಕನ್ನಡ ಬರಲ್ವಾ? ಕನ್ನಡದಲ್ಲಿ ಮಾತನಾಡಿ ಎಂದು ಹೇಳುತ್ತಾರೆ ಎಂದು ವಿವರಿಸಿದ್ದಾರೆ.
ಮನೆಯಲ್ಲಿ ವಿದ್ಯುತ್ ಸಮಸ್ಯೆ ಆದಾಗ ಕರೆ ಮಾಡಿದರೆ, ನೋ ಇಂಗ್ಲೀಷ್, ನೋ ಹಿಂದಿ, ಓನ್ಲಿ ಕನ್ನಡ ಎಂದು ಹೇಳಿ ಕರೆ ಕಟ್ ಮಾಡುತ್ತಾರೆ. ಕನ್ನಡಿಗರಿಗೆ ಮತ್ತು ಕನ್ನಡ ಮಾತನಾಡುವವರಿಗೆ ಮಾತ್ರ ಪ್ರತಿಕ್ರಿಯೆ ನೀಡುತ್ತಾರೆ ಎಂದು ಮತ್ತೊಂದು ಪೋಸ್ಟ್ ನಲ್ಲಿ ಮಹಿಳೆ ಘಟನೆಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹವಾಮಾನ ಕೂಡ ದೊಡ್ಡ ಸಮಸ್ಯೆ. ಇಲ್ಲಿ ಯಾವಾಗಲೂ ಮಳೆ ಬರುತ್ತಿರುತ್ತದೆ. ಹೊರಗೆ ಹೋಗಬೇಕಾದರೆ ಕ್ಯಾಬ್ ಕರೆಸಬೇಕು. ಕ್ಯಾಬ್ ಬಂದರೆ ನಾವು ನಿಗದಿತ ಜಾಗಕ್ಕೆ ಹೋಗಬೇಕಾದರೆ ಎರಡರಿಂದ ಮೂರು ಗಂಟೆ ಬೇಕು ಇದಕ್ಕೆ ಕಾರಣ ಟ್ರಾಫಿಕ್ ಮತ್ತು ಹವಾಮಾನ ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ವಾತಾವರಣದಿಂದ ಬೇಸತ್ತು ನಾನು ಗುರ್ ಗಾಂವ್ ಗೆ ಮರಳಿದೆ. ಈಗ ಆರಾಮವಾಗಿ ಓಡಾಡುತ್ತಿದ್ದೇನೆ. ಬೇಕಾದ್ದು ತಿನ್ನುತ್ತೇನೆ. ಮನಸ್ಸಿಗೆ ಹಾಯ್ ಎನಿಸಿದೆ. ಆಟೋ ಡ್ರೈವರ್ ಗಳ ಜೊತೆ ಜಗಳ ಅಂತೂ ಇಲ್ಲ ಎಂದು ಆಕೆ ವಿವರಿಸಿದ್ದಾರೆ.