ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ಮಾತ್ರವಲ್ಲ ವಿವಿಧ ನಿಗಮಗಳಲ್ಲೂ ಭ್ರಷ್ಟಾಚಾರ ನಡೆದಿರುವುದು ದಾಖಲೆಗಳ ಪ್ರಕಾರ ಬೆಳಕಿಗೆ ಬಂದಿದ್ದು, ಇದೀಗ ರಾಜ್ಯ ಸರ್ಕಾರ ಎಲ್ಲಾ ನಿಗಮ-ಮಂಡಳಿಗಳ ಪರಾಮರ್ಶೆ ನಡೆಸಬೇಕಾಗಿದೆ.
ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಾಗೂ ಮುಡಾದಲ್ಲಿ ನಡೆದ ಹಗರಣಗಳನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸುತ್ತಿವೆ. ರಾಜ್ಯ ಸರ್ಕಾರ ಕೂಡ ಎಸ್ ಐಟಿ ತನಿಖೆಗೆ ವಹಿಸಿದ್ದು, ತನಿಖೆ ಮುಂದುವರಿದಂತೆಲ್ಲಾ ಹೊಸ ಹೊಸ ಭ್ರಷ್ಟಾಚಾರಗಳು ಬೆಳಕಿಗೆ ಬರುತ್ತಿವೆ.
ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರವೇ 7 ನಿಗಮಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ವಿಶೇಷ ಅಂದರೆ ಕೇವಲ ಆಡಳಿತಾರೂಢ ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ಪಕ್ಷಗಳ ಮುಖಂಡರೂ ಇದರಲ್ಲಿ ಭಾಗಿಯಾಗಿರುವ ಆಘಾತಕಾರಿ ವಿಷಯವಾಗಿದೆ. ಅಲ್ಲದೇ ಬಹುತೇಕ ತನಿಖೆಗಳು ಪ್ರಗತಿಯಲ್ಲಿದ್ದರೆ ಮತ್ತು ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ನಿರ್ದೋಷಿ ಎಂದು ಸಾಬೀತಾಗಿ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.
ಯಾವ ನಿಗಮದಲ್ಲಿ ಎಷ್ಟು ಭ್ರಷ್ಟಾಚಾರ?
ಭೋವಿ ನಿಗಮ: ಅಕ್ರಮವಾಗಿ ಸರ್ಕಾರದ 87 ಕೋಟಿ ರೂ. ಯಾದಗಿರಿ ಶಾಖೆಯ ಯೆಸ್ ಬ್ಯಾಂಕ್ ನ ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ.
ಕೃಷಿ ಮಾರುಕಟ್ಟೆ ಮಂಡಳಿ: 47.16 ಕೋಟಿ ರೂ. ನಿಶ್ಚಿತ ಠೇವಣಿಯ ಮೊತ್ತವನ್ನು ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿ ನಂತರ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಆಗಿದ್ದು, ಸಿಐಡಿ ತನಿಖೆ ಹಿನ್ನೆಲೆಯಲ್ಲಿ ಬ್ಯಾಂಕ್ ಇಲಾಖೆಗೆ ಹಣವನ್ನು ಮರು ಪಾವತಿ ಮಾಡಿದ್ದಾರೆ.
ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮ: ವಿಜಯಾ ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಾಗಿ ಇರಿಸಲಾಗಿದ್ದ 22.43 ಕೋಟಿ ರೂ.ವನ್ನು ಎಸ್ ಬಿಐ ವರ್ಗಾವಣೆ ಮಾಡಿ ನಂತರ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ನಡೆಸುತ್ತಿರುವ ಸಿಐಡಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, 2.5 ಕೋಟಿ ರೂ. ಮೌಲ್ಯದ ಆಸ್ತಿ ಜಫ್ತಿ ಮಾಡಿಕೊಂಡಿದ್ದಾರೆ.
ಅಂಬೇಡ್ಕರ್ ನಿಗಮ: 4.95 ಕೋಟಿ ರೂ.ವನ್ನು 10 ಮಂದಿಯ ಸಿಂಡಿಕೇಟ್ ಖಾತೆಗಳಿಗೆ ಅಕ್ರಮವಾಗಿ ಹಂಚಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಂಧನಕ್ಕೊಳಗಾಗಿರುವ ಪದ್ಮನಾಭ್ ಈ ಪ್ರಕರಣದಲ್ಲೂ ಅಮಾನತುಗೊಂಡಿದ್ದರು. ಆದರೆ ಇಲಾಖಾ ತನಿಖೆಯಲ್ಲಿ ಯಾವುದೇ ದೋಷ ಕಂಡು ಬಾರದ ಹಿನ್ನೆಲೆಯಲ್ಲಿ ಪದ್ಮನಾಭ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಇಲಾಖೆಗೆ ಮರು ನೇಮಕ ಮಾಡಲಾಗಿತ್ತು.
ದೇವರಾಜ್ ಅರಸ್ ಟ್ರಕ್ ಟ್ರಮಿನಲ್ ನಿಗಮ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಕಾರಣ 47 ಕೋಟಿ ರೂ. ನಷ್ಟವಾಗಿದ್ದು, ಇದರಲ್ಲಿ ಬಿಜೆಪಿ ಮುಖಂಡ ಹಾಗೂ ನಿಗಮದ ಮಾಜಿ ಅಧ್ಯಕ್ಷ ಡಿಎಸ್ ವೀರಯ್ಯ 3 ಕೋಟಿ ರೂ. ತಮ್ಮ ವೈಯಕ್ತಿಕ ಖಾತೆಗೆ ಹಾಕಿಕೊಂಡಿದ್ದರಿಂದ ಬಂಧನಕ್ಕೆ ಒಳಗಾಗಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ: ಇಲಾಖೆಯ ಗಮನಕ್ಕೆ ಬಾರದೇ 10 ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಎಸ್ ಬಿಎಂ ಬ್ಯಾಂಕ್ ಪೊಲೀಸ್ ಇಲಾಖೆ ನಂತರ ಸಿಐಡಿ ಹಾಗೂ ನಂತರ ಇದೀಗ ಸಿಬಿಐ ತನಿಖೆ ನಡೆಸುತ್ತಿದೆ.
ಕೆಐಎಡಿಬಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇರಿಸಿದ್ದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಪ್ರಸ್ತುತ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.