ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ ಶೂಟರ್ ಸರ್ಬಜಿತ್ ಸಿಂಗ್ ಹರಿಯಾಣ ಸರ್ಕಾರ ನೀಡಿದ್ದ ಸರ್ಕಾರಿ ನೌಕರಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಜೊತೆ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. 22 ವರ್ಷದ ಸರ್ಬಜಿತ್ ಸಿಂಗ್ ವೈಯಕ್ತಿಕ ವಿಭಾಗದಲ್ಲಿ ಪದಕದ ಹೊಸ್ತಿಲಲ್ಲಿ ಎಡವಿದ್ದರು.
ಸರ್ಬಜಿತ್ ಸಿಂಗ್ ಒಲಿಂಪಿಕ್ಸ್ ಸಾಧನೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಆದರೆ ಸರ್ಕಾರದ ಬಹುಮಾನವನ್ನು ಸರ್ಬಜಿತ್ ಸಿಂಗ್ ನಯವಾಗಿಯೇ ತಿರಸ್ಕರಿಸಿದ್ದಾರೆ.
ಸರ್ಕಾರ ಒಳ್ಳೆಯ ಉದ್ಯೋಗವನ್ನೇ ನೀಡಿದೆ. ಆದರೆ ನಾನು ಸದ್ಯದ ಪರಿಸ್ಥಿತಿಯಲ್ಲಿ ಶೂಟಿಂಗ್ ಕಡೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇನೆ. ಸರ್ಕಾರಿ ಉದ್ಯೋಗದಿಂದ ನನ್ನ ಗಮನ ಬೇರೆಡೆಗೆ ಹರಿಯಬಹುದು ಎಂದು ಸರ್ಬಜಿತ್ ಸಿಂಗ್ ಹೇಳಿದ್ದಾರೆ.
ನನ್ನ ಕುಟುಂಬ ಕೂಡ ಉತ್ತಮ ಉದ್ಯೋಗ ಸಿಕ್ಕರೆ ಸೇರು ಎಂದು ಹೇಳುತ್ತಿದ್ದಾರೆ. ಆದರೆ ಶೂಟಿಂಗ್ ಮೇಲೆ ಗಮನ ಹರಿಸುವುದು ನನ್ನ ಮೊದಲ ಆದ್ಯತೆ ಆಗಿದೆ. ಸದ್ಯಕ್ಕೆ ಯಾವುದೇ ಉದ್ಯೋಗಕ್ಕೆ ಸೇರದಿರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.