ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ವೈದ್ಯರಿಗೆ ಕರ್ತವ್ಯ ನಿರ್ವಹಿಸುವ ಆಸ್ಪತ್ರೆಗಳಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ವರದಿ ಹೇಳಿದೆ.
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯರ ಸುರಕ್ಷತೆ ಕುರಿತು ಆನ್ ಲೈನ್ ಸಮೀಕ್ಷೆ ನಡೆಸಿದ ಐಎಂಎ ಕಾರ್ಯ ನಿರ್ವಹಿಸುವ ಸ್ಥಳವಾದ ಆಸ್ಪತ್ರೆಯಲ್ಲಿ ಅಭದ್ರತೆ ಕಾಡುತ್ತಿದೆ. ಅದರಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅತಿಯಾಗಿ ಅಭದ್ರತೆ ಕಾಡುತ್ತದೆ ಎಂದು ಹೆಚ್ಚು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯೆಯರಿಗೆ ಸಮಸ್ಯೆ ಎದುರಾದಾಗ ಪ್ರತಿಕ್ರಿಯಿಸಲು ಶೇ.45ರಷ್ಟು ಕಡೆ ಡ್ಯೂಟಿ ರೂಮ್ ಗಳೇ ಇಲ್ಲ. ಶೇ.53 ಕಡೆ ಡ್ಯೂಟಿ ರೂಮ್ ಇದ್ದರೂ ಇದು ಕರ್ತವ್ಯ ನಿರ್ವಹಿಸುವ ಜಾಗದಿಂದ ತುಂಬಾ ದೂರದಲ್ಲಿ ಇರುತ್ತದೆ.
ಐಎಂಎ ಇತ್ತೀಚೆಗೆ ವೈದ್ಯೆಯರ ಸುರಕ್ಷತೆ ಕುರಿತು ನಡೆಸಿದ ಈ ಸಮೀಕ್ಷೆ ಅತೀ ದೊಡ್ಡ ಸಮೀಕ್ಷೆಯಾಗಿದ್ದು, ದೇಶಾದ್ಯಂತ 3885 ಮಂದಿ ಪ್ರತಿಕ್ರಿಯಿಸಿದ್ದಾರೆ.
ದೇಶದ 22 ರಾಜ್ಯಗಳಲ್ಲಿ ಶೇ.85ರಷ್ಟು ವೈದ್ಯರು 35 ವರ್ಷದೊಳಗಿನವರಾಗಿದ್ದಾರೆ. ಶೇ.61ರಷ್ಟು ಮಂದಿ ಪದವಿ ಮುಗಿಸಿದ ನಂತರ ಬಂದ ಟ್ರೈನಿಗಳಾಗಿದ್ದಾರೆ. ಎಂಬಿಬಿಎಸ್ ಪದವಿ ಪಡೆದವರಲ್ಲಿ ಲಿಂಗ ತಾರತಮ್ಯ ಇದೆ ಎಂದು ಶೇ.63 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಶೇ.24.1ರಷ್ಟು ವೈದ್ಯೆಯರಿಗೆ ಅಭ್ರದತೆ ಕಾಡುತ್ತಿದ್ದರೆ, ಶೇ.11.4ರಷ್ಟು ವೈದ್ಯೆಯರಿಗೆ ಅತಿಯಾದ ಅಭದ್ರತೆ ಕಾಡುತ್ತಿದೆ. ಇದರಿಂದ ಮಹಿಳಾ ವೈದ್ಯೆಯರಿಗೆ ಸುರಕ್ಷಿತ ಭಾವನೆ ಕೆಲಸ ಮಾಡುವ ಜಾಗದಲ್ಲಿ ಇಲ್ಲ ಎಂದು ತಿಳಿದು ಬಂದಿದೆ.
20ರಿಂದ 30 ವರ್ಷದೊಳಗಿನ ವೈದ್ಯರಲ್ಲಿ ಅಭ್ರದತೆ ಕುರಿತು ಸಾಕಷ್ಟು ಅರಿವು ಇಲ್ಲ. ಏಕೆಂದರೆ ಇವರೆಲ್ಲಾ ತರಬೇತಿ ಹಂತದಲ್ಲಿ ಇರುವುದರಿಂದ ದೌರ್ಜನ್ಯ ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ.