ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಪ್ರಯತ್ನ ನಡೆಸಲಿದ್ದು, ಒಂದು ವೇಳೆ ಸಾಧ್ಯವಾಗದಿದ್ದರೆ ಉಪಾಧ್ಯಕ್ಷ ಸ್ಥಾನವಾದರೂ ಪಡೆಯುವ ಉದ್ದೇಶ ಹೊಂದಿದೆ.
18ನೇ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಒಂದು ವೇಳೆ ಬಹುಮತ ಪಡೆಯಲು ವಿಫಲವಾದರೆ ಉಪಾಧ್ಯಕ್ಷ ಸ್ಥಾನವನ್ನಾದರೂ ಪಡೆಯುವ ಗುರಿ ಹೊಂದಿದೆ.
ಜೂನ್ 24ರಿಂದ ಲೋಕಸಭಾ ಅಧಿವೇಶನ ಆರಂಭಗೊಳ್ಳಲಿದ್ದು, 9 ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಲಿದ್ದು, ನಂತರ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲೋಕಸಭಾ ಸ್ಪೀಕರ್ ಆಗಿ ಓಂಪ್ರಕಾಶ್ ಬಿರ್ಲಾ ಕಳೆದ ಬಾರಿ ಆಯ್ಕೆಯಾಗಿದ್ದು ಉಪಾಧ್ಯಕ್ಷ ಸ್ಥಾನ ಖಾಲಿ ಇದೆ. ಸ್ಪೀಕರ್ ಸ್ಥಾನಕ್ಕೆ ಎನ್ ಡಿಎ ಮೈತ್ರಿಕೂಟದ ತೆಲುಗುದೇಶಂ ಬೇಡಿಕೆ ಇಟ್ಟಿದ್ದು, 17 ವರ್ಷಗಳ ನಂತರ ಸ್ಪೀಕರ್ ಸ್ಥಾನ ಪಡೆಯುವ ಗುರಿ ಹೊಂದಿದೆ.
ಬಿಜೆಪಿ 240 ಸ್ಥಾನ ಪಡೆದಿದ್ದರೂ ಬಹುಮತ ಪಡೆದಿಲ್ಲ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸರ್ಕಾರ ರಚನೆಗೆ ಅಗತ್ಯ ಸ್ಥಾನ ಪಡೆಯದೇ ಇದ್ದರೂ 233 ಸ್ಥಾನದೊಂದಿಗೆ ಉತ್ತಮ ಪೈಪೋಟಿ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಪೈಪೋಟಿ ನಡೆಯುವ ಸಾಧ್ಯತೆ ಇದೆ.