ದೇಶಾದ್ಯಂತ ಬಿಸಿಗಾಳಿ ಬೀಸಲಿದ್ದು, ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಜನರನ್ನು ಕಾಡಲಿದೆ. ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್ ಹಾಗೂ ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಬಂಗಾಳಕೊಲ್ಲಿಯಲ್ಲಿ ಬಿಸಿಗಾಳಿ ಉದ್ಭವವಾಗುತ್ತಿದ್ದು, ಮೇ 2ರಿಂದ ಈಶಾನ್ಯ ರಾಜ್ಯಗಳಿಂದ ಆರಂಭವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ವ್ಯಾಪಿಸಲಿದೆ. ಇದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉಷ್ಣಾಂಶ ಉಂಟಾಗಲಿದೆ ಎಂದು ಎಚ್ಚರಿಸಿದೆ.
ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಕಡಲ ತೀರದಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಕರ್ನಾಟಕ, ಒಡಿಶಾ, ತೆಲಂಗಾಣ, ಬಿಹಾರ ಮತ್ತು ಜಾರ್ಖಂಡ್ ಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಮೇ 6ರಿಂದ ಕರ್ನಾಟಕ, ಒಡಿಶಾ, ಪುದುಚೇರಿ ತೆಲಂಗಾಣ, ಬಿಹಾರ ಮತ್ತು ಜಾರ್ಖಂಡ್ ಗಳಲ್ಲಿ ಬಿಸಿಗಾಳಿ ಪ್ರಭಾವ ಬೀರಲಿದೆ. ಈ ವೇಳೆ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಇರಲಿದೆ. ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ 6.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಕಾಡಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.