ಪಾಕಿಸ್ತಾನದ ಮೂಲಕ ತರಿಸಲಾದ ಎಕೆ-47 ಮತ್ತು ಎಂ-16 ಗನ್ ಗಳಿಂದ ಅಪ್ರಾಪ್ತ ಶಾರ್ಪ್ ಶೂಟರ್ ಗಳನ್ನು ಬಳಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆ ನಡೆಸಿ ಶ್ರೀಲಂಕಾಗೆ ಪರಾರಿಯಾಗಲು ಸಂಚು ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಖ್ಯಾತ ಪಂಜಾಬಿ ಗಾಯಕ ಸಿದು ಮೂಸೆವಾಲಾ ಅವರನ್ನು ಹತ್ಯೆಗೈದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಸಲ್ಮಾನ್ ಖಾನ್ ಹತ್ಯೆಗೆ ಮಾಸ್ಟರ್ ಪ್ಲಾನ್ ರೂಪಿಸಿತ್ತು ಎಂದು ತಿಳಿದು ಬಂದಿದೆ.
ಮೂಸೆವಾಲಾ ಹತ್ಯೆಗೆ ಬಳಸಿದ್ದ ಗನ್ ಗಳನ್ನೇ ಸಲ್ಮಾನ್ ಖಾನ್ ಹತ್ಯೆಗೆ ಬಳಸಲು ಸಂಚು ನಡೆದಿದ್ದು, ಇದು ಟರ್ಕಿ ಮೂಲದ ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ ಪಾಕಿಸ್ತಾನ ಮಧ್ಯವರ್ತಿಯಿಂದ ತರಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತರಿಸುತ್ತಿದ್ದ ಲಾರೆನ್ಸ್ ಗ್ಯಾಂಗ್, ಸಲ್ಮಾನ್ ಖಾನ್ ಮಾತ್ರವಲ್ಲ ದೇಶದ ಪ್ರಮುಖ 60ರಿಂದ 70 ಪ್ರಮುಖರ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಗ್ಯಾಂಗ್ ಪ್ರಮುಖರ ಹತ್ಯೆಗೆ ಅದರಲ್ಲೂ ಸಲ್ಮಾನ್ ಖಾನ್ ಹತ್ಯೆಗೆ ಅಪ್ರಾಪ್ತ ಯುವಕರನ್ನು ಬಳಸಲು ಸಿದ್ಧತೆ ನಡೆಸಿತ್ತು. ಇದಕ್ಕಾಗಿ ಯುವಕರನ್ನು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ವಾಟ್ಸಪ್ ಕಾಲ್ ಗಳ ಮೂಲಕ ಮಧ್ಯವರ್ತಿಗಳಿಂದ ಎಕೆ-47, ಎಂ-16 ಮತ್ತು ಎಕೆ-96 ಅತ್ಯಾಧುನಿಕ ಗನ್ ಗಳನ್ನು ಲಾರೆನ್ಸ್ ಗ್ಯಾಂಗ್ ತರಿಸುತ್ತಿತ್ತು. ಸಲ್ಮಾನ್ ಖಾನ್ ಹತ್ಯೆ ನಂತರ ಯುವಕರನ್ನು ಕನ್ಯಾಕುಮಾರಿ ಮೂಲಕ ಸಮುದ್ರ ಮಾರ್ಗವಾಗಿ ಶ್ರೀಲಂಕೆಗೆ ಕಳುಹಿಸುವುದು. ಅಲ್ಲಿ ಕೆಲ ದಿನಗಳು ತಂಗಿದ್ದ ನಂತರ ಕೆನಡಾಗೆ ಪ್ರಯಾಣ ಬೆಳಸಿ ಅಲ್ಲಿ ಸುರಕ್ಷಿತ ಪ್ರದೇಶದಲ್ಲಿ ಇರುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.