ಫ್ರಾನ್ಸ್ ರಾಜಧಾನಿ ಫ್ರಾನ್ಸ್ ನ ವಿಶ್ವವಿಖ್ಯಾತ ಸೈನಿ ನದಿಯ ಮೇಲೆ ಹೊಸ ಲೋಕವನ್ನೇ ಸೃಷ್ಟಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೆ ಚಾಲನೆ ದೊರೆಯಿತು.
ಇದೇ ಮೊದಲ ಬಾರಿ ನದಿಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಫ್ರಾನ್ಸ್ ಒಲಿಂಪಿಕ್ಸ್ ಗೆ ಹೊಸ ಮೆರಗು ನೀಡಿತು.
ಮಳೆಯ ನಡುವೆ ಉದ್ಘಾಟನಾ ಸಮಾರಂಭದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇತ್ತು. ಜಿಟಿಜಿಟಿ ಮಳೆಯ ನಡುವೆಯೂ ನದಿಯ ಮೇಲೆ ಹೊಸ ಲೋಕವನ್ನೇ ಸೃಷ್ಟಿಸುವ ಮೂಲಕ ಫ್ರಾನ್ಸ್ ವಿಭಿನ್ನ ಅನುಭವ ನೀಡಿತು.
ಅಮೆರಿಕದ ಗಾಯಕಿ ಲೇಡಿ ಗಾಗಾ ಫ್ರೆಂಚ್ ಭಾಷೆಯಲ್ಲಿಯೇ ಹಾಡು ಹಾಡಿದ್ದು ವಿಶೇಷವಾಗಿದ್ದು, ಈ ಹಾಡಿನೊಂದಿಗೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದರು. ನಂತರ ಬೋಟ್ ಗಳ ಮೇಲೆ ಅಥ್ಲೀಟ್ ಗಳ ಪೆರೇಡ್ ನಡೆಯಿತು.
ಕ್ರೀಡಾಪಟುಗಳನ್ನು ಹೊತ್ತ ಬೋಟುಗಳು ಆಗಮಿಸುತ್ತಿದ್ದಂತೆ ನದಿಯ ದಡದ ಇಕ್ಕೆಲಗಳಲ್ಲಿ ನಿರ್ಮಿಸಿದ್ದ ಕಲ್ಲಿನ ಮಂಟಪದ ಮೇಲೆ ಚಿನ್ನದ ಲೇಪನ ಹೊಂದಿದ ಫ್ರಾನ್ಸ್ ನ ಇತಿಹಾಸ ಪುರುಷ ಮತ್ತು ಮಹಿಳೆಯರ ಪುತ್ಥಳಿಗಳು ಮೇಲೆದ್ದು ಬಂದವು. ನದಿಗಳ ಮೇಲೆ ಕಾರಂಜಿ ಚಿಮ್ಮಿಸುವ ಸಣ್ಣ ದೋಣಿಗಳು ವಿಶೇಷ ಆಕರ್ಷಣೆಯಾಗಿದ್ದವು.
ಪ್ಯಾರಿಸ್ ನ ಐತಿಹಾಸಿಕ ಸೈನಿ ನದಿ ದಡದ ಮೇಲೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, 205 ದೇಶಗಳಿಂದ ಆಗಮಿಸಿದ್ದ 9500ಕ್ಕೂ ಅಧಿಕ ಕ್ರೀಡಾಪಟುಗಳ ಪಥಸಂಚಲನ ನಡೆಯಿತು.
ಫ್ರೆಂಚ್ ಅಧ್ಯಕ್ಷ ಎಮ್ಮಾನ್ಯಯೆಲ್ ಮಾರ್ಕೊನ್, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥ ಥಾಮಸ್ ಬ್ಯಾಚ್ ಮತ್ತು ಫುಟ್ಬಾಲ್ ದಂತಕತೆ ಜಿನಾದಿನ್ ಜಿದಾನೆ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.