ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸಿದ್ದಕ್ಕಾಗಿ ಬೆಂಗಳೂರಿನ ಸುಮಾರು 11 ಲಕ್ಷ ಗ್ರಾಹಕರು ಬೆಸ್ಕಾಂಗೆ ದಂಡ ಪಾವತಿಸಿದ್ದಾರೆ.
2024ರ ಜನವರಿ ಮತ್ತು ಫೆಬ್ರವರಿಯಲ್ಲಿ ಸುಮಾರು 11 ಲಕ್ಷ ಗ್ರಾಹಕರು ವಿದ್ಯುತ್ ಬಳಕೆಗೆ ಪಡೆದ ಅನುಮತಿಗಿಂತ ಹೆಚ್ಚು ವಿದ್ಯುತ್ ಬಳಸಿದ್ದಕ್ಕಾಗಿ ದಂಡ ಪಾವತಿಸಿದ್ದಾರೆ. ಬರಗಾಲ ಹಾಗೂ ಬಿಸಿಗಾಳಿ ಸಮಸ್ಯೆಯಿಂದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ದಂಡ ಪಾವತಿಸುವವರ ಸಂಖ್ಯೆ ಮತ್ತು ದಂಡದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವಿದ್ಯುತ್ ಬಳಕೆಗೆ ನಿಗದಿತ ಪ್ರಮಾಣದ ವೋಲ್ಟೇಜ್ ಗೆ ಅನುಮತಿ ಪಡೆಯುತ್ತಾರೆ. ಆದರೆ ಬಳಕೆ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಗ್ರಾಹಕರಿಗೆ ವಿದ್ಯುತ್ ಬಳಕೆಯ ಪ್ರಮಾಣ ಅರಿತು ಹೆಚ್ಚು ವೋಲ್ಟೇಜ್ ವಿದ್ಯುತ್ ಬಳಕೆಗೆ ಅನುಮತಿ ಪಡೆಯುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ದಂಡ ಪಾವತಿಸಿದವರಲ್ಲಿ ಹೆಚ್ಚಿನವರು ಮನೆಗೆ ವಿದ್ಯುತ್ ಸಂಪರ್ಕ ಪಡೆದವರಾಗಿದ್ದಾರೆ. ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ ಹೊಸ ಎಲೆಕ್ಟ್ರಾನಿಕ್ ಉಪಕರಣ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಬಹುತೇಕ ಮನೆಗಳು 20ರಿಂದ 30 ವರ್ಷ ಹಳೆಯದಾಗಿವೆ. ಆಗಿನ ಕಾಲಕ್ಕೆ ತಕ್ಕಂತೆ 2ರಿಂದ 3 ಕಿಲೋ ವ್ಯಾಟ್ ವಿದ್ಯುತ್ ಬಳಕೆಗೆ ಅನುಮತಿ ಪಡೆದಿದ್ದರು. ಆದರೆ ಈಗ ಬಳಕೆ ಪ್ರಮಾಣ ಹೆಚ್ಚಾಗಿದೆ. ಹಳೆಯ ಉಪಕರಣಗಳು ಹೆಚ್ಚು ಒತ್ತಡ ತಡೆಯುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.