ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ಪ್ರಧಾನಿ ಮೋದಿ ಆಗಸ್ಟ್ ನಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ.
ಇತ್ತೀಚೆಗೆ ದಾಳಿ ನಡೆಸಿದ ರಷ್ಯಾಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಇದೀಗ ಉಕ್ರೇನ್ ಗೆ ಭೇಟಿ ನೀಡಲಿದ್ದು ಕುತೂಹಲ ಮೂಡಿಸಿದೆ.
ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿ ಪ್ರಧಾನಿ ಮೋದಿ ಉಕ್ರೇನ್ ಗೆ ಭೇಟಿ ನೀಡಲಿದ್ದು, ಅಧ್ಯಕ್ಷ ವೊಲೊಡೈಮರ್ ಜೆಲೆಂಸ್ಕಿ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಜೆಲೆಂಸ್ಕಿ ಮತ್ತು ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಆದರೆ ಯಾವುದೇ ಮಾತುಕತೆ ಆಗಿರಲಿಲ್ಲ. ಮೂರನೇ ಬಾರಿ ಮೋದಿ ಪ್ರಧಾನಿ ಆಗಿ ಆಯ್ಕೆಯಾದ ಸಂದರ್ಭದಲ್ಲಿ ಜೆಲೆಂಸ್ಕಿ ಕರೆ ಮಾಡಿ ಶುಭ ಹಾರೈಸಿದ್ದರು.
ಉಕ್ರೇನ್ ಅಧ್ಯಕ್ಷರಿಗೆ ಕರೆ ಮಾಡಿರುವ ಮೋದಿ ಭೇಟಿ ಕುರಿತು ಪ್ರಸ್ತಾಪಿಸಿದ್ದಾರೆ. ಈ ವೇಳೆ ಜೆಲೆಂಸ್ಕಿ ಯುದ್ಧದಿಂದ ತತ್ತರಿಸಿರುವ ಉಕ್ರೇನ್ ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ನಲ್ಲಿ ಮೋದಿ ಉಕ್ರೇನ್ ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.