ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಒಟ್ಟು 78 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿದೆ. 50 ವಾರ್ಡ್‍ಗಳನ್ನು ಬಿಜೆಪಿ ಗೆದ್ದಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂಬುದಾಗಿ ಭಾವಿಸುತ್ತೇನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ತಿಳಿಸಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಈ ಕೂಡಲೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಘೋಷಿಸಬೇಕು. ಸಣ್ಣಪುಟ್ಟ ಹೊಂದಾಣಿಕೆ ಮಾಡುವ ವಿಷಯದಲ್ಲಿ ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ತಕ್ಷಣವೇ ಗ್ರೇಟರ್ ಬೆಂಗಳೂರು ಅಥಾರಿಟಿಗೆ ಚುನಾವಣೆ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸನ್ನು, ಗೆಲುವನ್ನು ಸಾಧಿಸಿದೆ. ಗೆದ್ದ ಅಭ್ಯರ್ಥಿಗಳು, ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ, ನೇತೃತ್ವ ವಹಿಸಿದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ, ರಾಜ್ಯ ಘಟಕಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ಸರಕಾರ, ಅತಿಯಾದ ತುಷ್ಟೀಕರಣ, ತೀವ್ರ ಬೆಲೆ ಏರಿಕೆ, ಅಭಿವೃದ್ಧಿ ಶೂನ್ಯವಾಗಿರುವುದು, ಎಲ್ಲ ಸರಕಾರಿ ಕಚೇರಿಗಳಲ್ಲಿ ಲಂಚಗುಳಿತನ ಪರಾಕಾಷ್ಠೆ ಮುಟ್ಟಿರುವುದು, ರೈತರ ನಿರ್ಲಕ್ಷ್ಯ, ದಲಿತರ ಹಣವನ್ನು ದುರುಪಯೋಗ ಮಾಡಿರುವುದು, ಎಸ್‍ಇಪಿ, ಟಿಎಸ್‍ಪಿ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿದ್ದು- ಇವೆಲ್ಲವನ್ನೂ ಕರ್ನಾಟಕದ ಜನರು ಆಕ್ರೋಶವಾಗಿ ಪರಿಗಣಿಸಿದ್ದರು. ಇದು ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಿದರು.


