ನನ್ನಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ. ನನ್ನಿಂದ ಪಕ್ಷ ಇದೆ ಎಂದು ಯಾರೂ ಹೇಳಬಾರದು. ಕಾಂಗ್ರೆಸ್ ಪಕ್ಷ ಯಾರೊಬ್ಬರಿಂದ ಇಲ್ಲ. ಎಲ್ಲರಿಂದಾಗಿ ಪಕ್ಷ ಇರುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ನಾಯಕ ನನ್ನಿಂದ ಪಕ್ಷ ಇದೆ ಅಥವಾ ಗೆದ್ದಿದ್ದೆ ಎಂದು ಹೇಳಬಾರದು. ಪಕ್ಷದ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತರಿಂದ ಪಕ್ಷ ಮುನ್ನಡೆಯುತ್ತಿದೆ ಎಂದರು.
ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಕುರಿತು ಹೈಕಮಾಂಡ್ ಗೆ ಯಾವುದೇ ಗೊಂದಲ ಇಲ್ಲ. ಆದರೆ ರಾಜ್ಯದ ಕೆಲವು ನಾಯಕರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೇ ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಗೊಳಿಸಿ ಹೊಸ ಮಸೂದೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು, ಇದರಿಂದ ಬಡವರ ದುಡಿಮೆ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿ ಮನರೇಗಾ ಯೋಜನೆ ತರಾತುರಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ಪಡೆದಿದೆ. ಇದು ದೇಶದ ಬಡಜನತೆಗೆ ದೊಡ್ಡ ಕೊಡಲಿ ಪೆಟ್ಟು. ಬದುಕಲು ಬೇಕಾದ ದುಡಿಮೆ ಹಕ್ಕು ಕಸಿದುಕೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೊರಗಿನ ಜನರಿಗೆ ಉದ್ಯೋಗ ಕೊಡಬಹುದು ಎಂಬ ನಿಯಮ ಸೇರಿಸಲಾಗಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಕ್ಕೆ ಧಕ್ಕೆ ಆಗಲಿದೆ ಎಂದು ಅವರು ಹೇಳಿದರು.


