Wednesday, December 24, 2025
Google search engine
Homeರಾಜಕೀಯಕಲ್ಯಾಣ ಕರ್ನಾಟಕದ ಪರಿಹಾರ ವಿತರಣೆ ಮಾಹಿತಿ ನೀಡಲು ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ...

ಕಲ್ಯಾಣ ಕರ್ನಾಟಕದ ಪರಿಹಾರ ವಿತರಣೆ ಮಾಹಿತಿ ನೀಡಲು ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗಡುವು

ಬೆಂಗಳೂರು: ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಈವರೆಗೆ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ ಬಗ್ಗೆ 48 ಗಂಟೆಗಳಲ್ಲಿ ಜನತೆಗೆ ಸಮಗ್ರ ಮಾಹಿತಿ ನೀಡಿಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ.

ಜೆಡಿಎಸ್‌ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಪ್ರವಾಹದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ 3-4 ದಿನಗಳಲ್ಲಿ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಈ ಸರಕಾರ ಏನೆಲ್ಲಾ ಪರಿಹಾರವನ್ನು ಒದಗಿಸಿದೆ ಎಂಬುದನ್ನು ಖುದ್ದು ನೋಡುತ್ತೇನೆ ಎಂದರು.

ಸಾಧ್ಯವಿರುವ ಕಡೆಗಳಿಗೆ ನಾನು ರಸ್ತೆಯ ಮೂಲಕವೇ ತೆರಳಿ ನೆರೆ ಸಂತ್ರಸ್ತರನ್ನು ಭೇಟಿ ಮಾಡುತ್ತೇನೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವರಿಂದ ಮಾಹಿತಿ ಪಡೆಯುತ್ತೇನೆ. ಆಗಿರುವ ನಷ್ಟದ ಬಗ್ಗೆ ವಿವರ ಪಡೆದು ಅದಕ್ಕೆ ತಕ್ಕಂತೆ ರಾಜ್ಯ ಸರಕಾರ ನೆರವಿಗೆ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ನೆರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರಕಾರ ಇದನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು. ಆದರೆ ಖಜಾನೆಯಲ್ಲಿ ಹಣವಿಲ್ಲ ಎಂದು ಶಾಸಕರೇ ಹೇಳುತ್ತಿರುವುದನ್ನು ಗಮನಿಸಿದ್ದೇನೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ನೆರೆ ಪೀಡಿತ ಜಿಲ್ಲೆಗಳಿಗೆ ಮತ್ತು ಇನ್ನಿತರ ಬಾಬ್ತುಗಳಿಗೆ ಹಣವಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ತೀವ್ರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಈ ಸರಕಾರದ ಬಳಿ ಹಣವಿಲ್ಲ ಎಂದು ದೇವೇಗೌಡರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನೆರೆಯಿಂದಾಗಿ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಷ್ಟು ಜಾನುವಾರುಗಳು ಸಾವನ್ನಪ್ಪಿವೆ. ದೊಡ್ಡ ಪ್ರಮಾಣದಲ್ಲಿ ಆಸ್ತಿ, ಬೆಳೆ ನಷ್ಟವಾಗಿದೆ. ಮೂಲಸೌಕರ್ಯಗಳಲ್ಲಿ ರಸ್ತೆಗಳು, ಸೇತುವೆಗಳು ಕುಸಿದಿವೆ. ಮನೆಗಳಿಗೆ ನೆರೆ ನೀರು ನುಗ್ಗಿ ಜನರು ನಿರ್ಗತಿಕರಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಕ್ಟೋಬರ್‌ ನಲ್ಲಿ ಮಹಿಳಾ ಸಮಾವೇಶ

ಪಕ್ಷ ಸಂಘಟನೆಗೆ ನಾನು ಶ್ರಮ ಹಾಕುತ್ತೇನೆ. ಹಿಂದಿನಂತೆ ಕೇಂದ್ರ ಸಚಿವರಾದ ಹೆಚ್​​.ಡಿ ಕುಮಾರಸ್ವಾಮಿ ಅವರು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯನ್ನು ಮಾಡುತ್ತಿದ್ದಾರೆ. ಮೂರು ಸಲ ಅವರು ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೆ ಸಂಘಟನೆ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಲಿನ ಅನುಭವದಿಂದ ಪಾಠ ಕಲಿತು ರಾಜ್ಯ ಪ್ರವಾಸ ಮಾಡುತ್ತಿರುವ ಅವರು, ಅನುಭವೀ ರಾಜಕಾರಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಖಿಲ್‌ ಕುಮಾರಸ್ವಾಮಿ ಅವರು ರಾಜ್ಯ ವ್ಯಾಪಿ ನಡೆಸುತ್ತಿರುವ ಸದಸ್ಯ ಅಭಿಯಾನ ಮತ್ತು ಸಂಘಟನಾ ಪ್ರವಾಸ ಯಶಸ್ವಿಯಾಗಿದೆ. ಅಲ್ಲದೆ; ಬೆಂಗಳೂರು ನಗರದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತೇವೆ. ಈ ನಿಟ್ಟಿನಲ್ಲಿ ಅಕ್ಟೋಬರ್ 12ರಂದು ಜೆಡಿಎಸ್ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಕನಿಷ್ಠ 50,000- 60,000 ಮಹಿಳೆಯರು ಭಾಗವಹಿಸಲಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದು ಎಂದ ಅವರು; ಚುನಾವಣೆ ಬಂದಾಗ ನಮ್ಮ ಶಕ್ತಿ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಮುಂಬರುವ ಜಿಬಿಎ ಚುನಾವಣೆಯಲ್ಲಿ ಕನಿಷ್ಠ 50-60 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್​​​ ಹೊಂದಿದೆ. ಹೀಗಾಗಿ ನಗರದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಬಾಧಿತ

ಲೋಕಸಭೆ ಚುನಾವಣೆಗೆ ಜೆಡಿಎಸ್‌ – ಬಿಜೆಪಿ ಮೈತ್ರಿ ಮಾಡಿಕೊಂಡವು. ಈ ಮೈತ್ರಿ ಮುಂದಿನ ಚುನಾವಣೆಗಳಿಗೂ ಅಬಾಧಿತವಾಗಿ ಮುಂದುವರಿಯುತ್ತದೆ. ಯಾವುದೇ ಚುನಾವಣೆಯಾದರೂ ಮೈತ್ರಿಗೆ ಧಕ್ಕೆ ಇಲ್ಲ. ಈ ಬಗ್ಗೆ ಯಾರೂ ಚಿಂತಿಸುವ ಅಗತ್ಯವಿಲ್ಲ. ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಗಳಿಗೂ ಮುಂದುವರಿಯುತ್ತದೆ ಎಂದು ದೇವೇಗೌಡರು ಒತ್ತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನನ್ನ ಸಂಬಂಧ ಎಂದಿಗೂ ಬದಲಾಗುವುದಿಲ್ಲ. ನಮ್ಮ ಬಾಂಧವ್ಯ ಉತ್ತಮವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾನು ಅವರ ಬಗ್ಗೆ ಲಘುವಾಗಿ ಮಾತನಾಡಿದ ಒಂದು ಸಂದರ್ಭವನ್ನು ತೋರಿಸಿ’ ಎಂದು ಹೇಳಿದರು.

ಬಿಡದಿ ಟೌನ್ ಶಿಪ್ ಬಗ್ಗೆ ಎಲ್ಲಾ ಗೊತ್ತಿದೆ

ಈ ಯೋಜನೆ ಬಗ್ಗೆ ನನಗೆ ಎಲ್ಲಾ ಮಾಹಿತಿಯೂ ಇದೆ. ಭೂಸ್ವಾಧೀನಕ್ಕೆ ರೈತರು ವಿರೋಧ ಮಾಡುತ್ತಿದ್ದಾರೆ. ಸರಕಾರ ಕಾಂಗ್ರೆಸ್ ಕೈಯ್ಯಲ್ಲಿದೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿಯವರೆಗೂ ಕಾಯಬೇಕು ಎಂದು ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು.

ಈ ಯೋಜನೆಯ ಬಗ್ಗೆ ಬೇರೆಯವ ಹೆಸರು ತೆಗೆದು ಚರ್ಚೆ ಮಾಡುವುದು ಬೇಡ. ಆ ವಿಚಾರವನ್ನು ನಾನು ಮಾತಾಡಲು ಹೋಗಲ್ಲ. ಮೂರು ತಿಂಗಳ ಹಿಂದೆ ಮಾಧ್ಯಮಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಮ್ಮ ಮನೆ ಬಳಿಯೇ ಇರುತ್ತಿದ್ದವು. ಇದು ಯಾರ ಪ್ರೇರಣೆಯಿಂದ? ಅದರ ಹಿಂದೆ ಯಾರ ಶಕ್ತಿ ಇತ್ತು? ನನಗೆ ಗೊತ್ತಿದೆ. ಅದರ ಬಗ್ಗೆ ಚರ್ಚೆ ಬೇಡ. ನಮ್ಮದು ಸಣ್ಣ ರಾಜಕೀಯ ಪಕ್ಷ. ಇರಲಿ, ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ ಎಂದು ಯಾರ ಹೆಸರನ್ನೂ ಹೇಳಿದೆ ಕುಟುಕಿದರು ದೇವೇಗೌಡರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್.‌ ಪ್ರಸಾದ್‌, ವಿಧಾನ ಪರಿಷತ್‌ ಸದಸ್ಯರಾದ ಟಿ. ಜವರಾಯಿ ಗೌಡ, ವಿವೇಕಾನಂದ, ಮಾಜಿ ಎಮ್ಮೆಲ್ಸಿಗಳಾ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ನಿಂಗಪ್ಪ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.‌ಎಂ. ರಮೇಶ್‌ ಗೌಡ, ನಗರ ಘಟಕದ ಮಹಿಳಾ ಅಧ್ಯಕ್ಷೆ ಶೈಲಾ ಸಂತೋಷ ರಾವ್‌ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments