ಮೂರ್ನಾಲ್ಕು ಬಾರಿ ಗೆದ್ದ ಶಾಸಕರಿಗೆ ಇನ್ನೂ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಳಿಕ ಹಿರಿಯ ಸಚಿವರು ಅವಕಾಶ ಮಾಡಿಕೊಡಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದ್ದಾರೆ.
ಕೋಲಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಹಿಂದೆ ಹೇಳಿದ ಮಾತಿಗೆ ನಾನು ಈಗಲೂ ಬದ್ಧ. ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್. ಮುಖ್ಯಮಂತ್ರಿ ಬದಲಾವಣೆ ಕುರಿತಾಗಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಲಿ ಪಕ್ಷದಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.
ಕದನ ವಿರಾಮ ಕುರಿತಂತೆ ಪ್ರತಿಕ್ರಿಯಿಸಿ, ‘ಕದನ ವಿರಾಮವನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ನಾಗರಿಕರನ್ನು ಕಳೆದುಕೊಂಡ ನೋವು ಇದ್ದರೂ ಕಲಹ ಹಾಗೂ ಯುದ್ಧದಿಂದ ಯಾವುದೇ ಲಾಭವಿಲ್ಲ ಎಂದರು.
ಪಹಲ್ಗಾಮ್‌ನಲ್ಲಿ ನಮ್ಮ ಜನರನ್ನು ಉಗ್ರರು ಕೊಂದ್ದಕ್ಕೆ ನಾವು ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆಯೇ ಹೊರತು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅವಶ್ಯ ಇರಲಿಲ್ಲ. ಪಾಕಿಸ್ತಾನದ ನಾಗರಿಕರನ್ನಾಗಲಿ, ಅಲ್ಲಿನ ಸೈನಿಕರನ್ನಾಗಲಿ ನಾವು ಮುಟ್ಟಿಲ್ಲ’ ಎಂದು ತಿಳಿಸಿದರು.
ಶಾಂತಿಯಿಂದ ಸಾಧನೆ ಮಾಡಬೇಕೆಂದು ಗಾಂಧಿ ಪಾಠ ಹೇಳಿಕೊಟ್ಟಿದ್ದಾರೆ. ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಅವರ ವಿರುದ್ಧ ನಾವು ಗೆದ್ದಿದ್ದು ಯುದ್ಧದಿಂದ ಅಲ್ಲ; ಶಾಂತಿಯಿಂದ. ಆ ಸಿದ್ಧಾಂತದಲ್ಲೇ ನಾವು ಇದ್ದೇವೆ ಎಂದರು.
ಬಿಪಿಎಲ್ ಪಡಿತರ: ‘ಶೀಘ್ರದಲ್ಲೇ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಕೊಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ತಪ್ಪದೇ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ’ ಎಂದು ಹೇಳಿದರು.
ನಾನು ಕೋಲಾರಕ್ಕೆ 15 ದಿನಗಳಿಗೊಮ್ಮೆ ಬಂದು ಜನರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ. ಮುಂಬರುವ ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಒಟ್ಟಿಗೆ ಹೋಗಿ ಗೆದ್ದುಕೊಂಡು ಬರಬೇಕು ಎಂದರು.


