ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 100 ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡದೇ ಇದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸಲು ಜಾತ್ಯತೀತ ಜನತಾದಳ ನಿರ್ಧರಿಸಿದೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಜೆಡಿಎಸ್ ಮುಂಬರುವ ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಸಾಕಷ್ಟು ಅಸಮಾಧಾನಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಜಿಬಿಎನ 5 ಪಾಲಿಕೆ ವ್ಯಾಪ್ತಿಯ 369 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಸ್ಪರ್ಧಿಸಲು ಬಿಜೆಪಿ ಓಲೈಸಲು ತೀರ್ಮಾನಿಸಲಾಯಿತು.
ಬಿಜೆಪಿ ಜೊತೆ ಸೀಟು ಹಂಚಿಕೆಯಲ್ಲಿ 100 ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸುವುದು, ಒಂದು ವೇಳೆ ಸ್ಥಾನ ಹಂಚಿಕೆಯಲ್ಲಿ ಗೊಂದಲ ಉಂಟಾದರೆ ಕನಿಷ್ಠ 80 ಸ್ಥಾನ ಕೇಳಬೇಕು. ಇದಕ್ಕಿಂತ ಕಡಿಮೆ ಸ್ಥಾನ ನೀಡಿದರೆ ಪ್ರತ್ಯೇಕವಾಗಿ ಸ್ಪರ್ಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳಬೇಕು. ಮುಂಬರುವ ಚುನಾವಣೆಯಲ್ಲಿ ಗೆದ್ದು ಮತ್ತೆ ಸಿಎಂ ಸ್ಥಾನ ಅಲಂಕರಿಸಬೇಕು ಎಂಬ ಒತ್ತಡಗಳು ಕೇಳಿ ಬಂದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ದೆಹಲಿ ಮಟ್ಟದಲ್ಲಿ ಮೈತ್ರಿ ಆಗಿರುವುದರಿಂದ ಕಾದು ನೋಡಲು ತೀರ್ಮಾನಿಸಲಾಯಿತು.
ಬಿಜೆಪಿ ಜೊತೆ ಮೈತ್ರಿಯಿಂದ ಮಂಡ್ಯ, ಹಾಸನ ಮುಂತಾದ ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮುಂದುವರಿಯಬೇಕಾದರೆ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಹಿಡಿತ ಹೊಂದಿರುವ ಜಿಲ್ಲೆಗಳಲ್ಲಿ ಪಕ್ಷಕ್ಕೆ ಮನ್ನಣೆ ಸಿಗಬೇಕು ಎಂಬ ಒತ್ತಡಗಳು ಕೇಳಿಬಂದಿವೆ.


