ಜಮೀರ್ ಅಹ್ಮದ್ ಗೆ ದುಡ್ಡಿನ ಮದ ಬಂದಿದೆ. ನ್ಯಾಯವಾಗಿ ಬಸ್ ಓಡಿಸಿ ದುಡ್ಡು ಮಾಡಿದ್ದಾ? ಈ ದುಡ್ಡಿಂದ ದೇವೇಗೌಡರನ್ನು ಖರೀದಿಸ್ತಾರಾ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಸಾಮಾನ್ಯವಾಗಿ ಗುಜರಿ ಅಂಗಡಿ, ಪಂಚರ್ ಅಂಗಡಿ ಇಟ್ಟುಕೊಳ್ಳುತ್ತಾರೆ. ಇದರಿಂದ ಬಂದ ದುಡ್ಡಲ್ಲಿ ದೇವೇಗೌಡರನ್ನು ಖರೀದಿಸಲು ಆಗುತ್ತಾ ಎಂದು ಪ್ರಶ್ನಿಸಿದರು.
ಜಮೀರ್ ಅಹ್ಮದ್ ಗೆ ದುಡ್ಡಿನ ಮದ ಬಂದಿದೆ. ಅದಕ್ಕೆ ಹೀಗೆಲ್ಲಾ ಮಾತನಾಡಿದ್ದಾರೆ. ಬಸ್ ಓಡಿಸಿ ಇಷ್ಟೆಲ್ಲಾ ದುಡ್ಡು ಮಾಡೋಕೆ ಆಗುತ್ತಾ ಅವರಿಗೆ? ನಾನು ಈ ಬಗ್ಗೆ ನಂತರ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ನಾನು ಕಪ್ಪಾಗಿ ಇದ್ದೇನೆ ಅದಕ್ಕೆ ಕರಿಯ ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಆದರೆ ನಾನು ಯಾವತ್ತೂ ಜಮೀರ್ ಗೆ ಕುಳ್ಳ ಎಂದು ಹೇಳಿಲ್ಲ. ಹಾಗೆ ಎಲ್ಲಿ ಹೇಳಿದ್ದೇನೆ ಎಂದು ಅವರು ಹೇಳಲಿ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.