ಮಂಡ್ಯ: ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ 40 ವರ್ಷಗಳ ರಾಜಕೀಯ ಅನುಭವ ಇದೆ. ಅವರಿಗೆ ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಇದೆ. ಯಾವಾಗ ಯಾವ ಪಾನ್ ಮೂವ್ ಮಾಡಿದರೆ ಗೇಮ್ ಗೆಲ್ಲಬಹುದೆಂದು ಗೊತ್ತಿದೆ ಎಂದರು.
ಡಿಕೆ ಶಿವಕುಮಾರ್ ಬುದ್ಧಿವಂತಿಕೆ ಇರುವುದಕ್ಕೆ ಸೈಲೆಂಟಾಗಿ ಕಾಯಿನ್ ಮೂವ್ ಮಾಡುತ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು, ಆಟ ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ. ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಖಂಡಿತ ಈಡೇರಲಿದೆ ಎಂದರು.
ಡಿಕೆ ಶಿವಕುಮಾರ್ ಇದೇ ತಿಂಗಳ 26, 27, 28ರಲ್ಲಿ ಸಿಎಂ ಸ್ಥಾನ ಅಲಂಕರಿಸುತ್ತಾರೋ ಅಥವಾ ಮಾರ್ಚ್ ನಲ್ಲಿ ತೆಗೆದುಕೊಳ್ಳುತ್ತಾರೋ ಎಂಬುದು ಹಣೆಯಲ್ಲಿ ಬರೆದಂತೆ ಆಗುತ್ತೆ. ಆದರೆ ಅದನ್ನು ನಾವು ಸಮಯ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಯತೀಂದ್ರನೇ ಹೈಕಮಾಂಡ್
ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು, ಆದರೆ ಹೈಕಮಾಂಡ್ಗೆ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ ಎಂದು ರವಿ ಗಾಣಿಗ ವ್ಯಂಗವಾಡಿದರು.
ಯತೀಂದ್ರ ನಮ್ಮ ಹೈಕಮಾಂಡ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಾಗಿ ನಾನೂ ಅದನ್ನೇ ಹೇಳುತ್ತೇನೆ, ಯತೀಂದ್ರ ನಮ್ಮ ಹೈಕಮಾಂಡ್ ಎನ್ನುವುದನ್ನು ನೂರಕ್ಕೆ ನೂರರಷ್ಟು ಒಪ್ಪಿಕೊಳ್ಳುತ್ತೇವೆ ಎಂದರು.
ಯಾರೂ ಹೇಳಿಕೆ ಕೊಡಬೇಡಿ ಎಂದು ನಾಲ್ಕು ಬಾರಿ ಹೇಳಿದ ಮೇಲೂ ಯತೀಂದ್ರ ಹೇಳಿಕೆ ಕೊಡುತ್ತಿದ್ದಾರೆ ಎಂದರೆ, ಅವರೇ ಸುಪ್ರೀಂ. ಖರ್ಗೆಗಿಂತ ಜಾಸ್ತಿನಾ, ಡಿಕೆಗಿಂತ ಕಡಿಮೆನಾ ಎಂದು ಹೇಳಲು ಆಗಲ್ಲ. ಬೇಡ ಅಂದರೂ ಮಾತನಾಡುತ್ತಿದ್ದಾರೆ ಅಂದರೆ ಪವರ್ಫುಲ್ ಮ್ಯಾನ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯತೀಂದ್ರ ವಿರುದ್ಧ ಗಣಿಗ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ನಾಯಕತ್ವ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್ ಸೂಚನೆಯ ಬಳಿಕವೂ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಗಣಿಗ ರವಿಕುಮಾರ್ ಅವರು ಯತೀಂದ್ರ ಅವರನ್ನು ಲೇವಡಿ ಮಾಡಿ ನಾಯಕತ್ವ ಬದಲಾವಣೆ ಖಚಿತ ಎಂದು ಹೇಳಿದರು.


