ಹಿರಿಯ ನಟ ಪ್ರಕಾಶ್ ರಾಜ್ ಕರ್ನಾಟಕ ನಾಟಕ ಅಕಾಡೆಮಿ ಘೋಷಿಸಿದ್ದ ವಾರ್ಷಿಕ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ಪ್ರಕಾಶ್ ರಾಜ್, ಹಿರಿಯ ನಟಿ ಉಮಾಶ್ರಿ ಸೇರಿದಂತೆ 93 ಹಿರಿಯ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದೆ.
ಉಮಾಶ್ರಿ, ನಾಟಕಕಾರ ಎಚ್ಹೆಸ್ ಶಿವಪ್ರಕಾಶ್ , ರಂಗ ಸಂಘಟಕ ಕೋಟಗಾನಹಳ್ಳಿ ರಾಮಯ್ಯಗೆ ಕರ್ನಾಟಕ ಅಕಾಡಮೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಘೋಷಿಸಿ ಗೌರವಿಸಿದೆ.
ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಎರಡು ಸಾಲುಗಳಲ್ಲಿಪ್ರಶಸ್ತಿ ನೀಡಿರಲಿಲ್ಲ. ಸದ್ಯ, 2022-23, 2023-24 ಮತ್ತು 2024-25ನೇ ಸಾಧಿಲಿಗೆ ಮೂವರಿಗೆ ಜೀವಮಾನ ಸಾಧನೆಗಾಗಿ ಗೌರವ ಪ್ರಶಸ್ತಿ, ತಲಾ 25ರಂತೆ ಒಟ್ಟು 75 ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗೆ ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರಿಗೆ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ.
ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರಾಜ್, ನನ್ನ ಮನಃ ಸಾಕ್ಷಿ ಒಪ್ಪುತ್ತಿಲ್ಲ, ಕ್ಷಮಿಸಿ ಎಂದು ನಯವಾಗಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ನಾನು ಈಗಷ್ಟೆ ರಂಗಭೂಮಿಗೆ ಮರಳಿ ಬಂದ್ದಿದ್ದೇನೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ನನಗಿಂತಲೂ ಅರ್ಹರು ರಂಗಭೂಮಿಯಲ್ಲಿ ಇರುವುದರಿಂದ ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಕ್ಷಮಿಸಿ ಅಭಿನಂದಿಸಿದ ಸಹೃದಯರಿಗೆ ಧನ್ಯವಾದಗಳು ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಪ್ರಕಾಶ್ ರಾಜ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತನಗಿಂತಲೂ ಅರ್ಹರಿಗೆ ಮೊದಲು ಈ ಪ್ರಶಸ್ತಿ ಸಲ್ಲಬೇಕು ಅನ್ನೋ ನಟರ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ. ದಿಟ್ಟ ನಿರ್ಧಾರ ಘೋಷಿಸಿದ ಪ್ರಕಾಶ್ ರಾಜ್ಗೆ ಅಭಿನಂದನೆಗಳು ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.