ಹಿತಾಸಕ್ತಿಯ ಗುಂಪೊಂದು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದಿಶ್ ಅಗರ್ ವಾಲ್, ಚೇತನ್ ಮಿಥಲ್, ಉದಯ್ ಹೊಳ್ಳ, ಸ್ವರೂಪಮ ಚತುರ್ವೇದಿ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಖ್ಯಾತ ವಕೀಲರು ನ್ಯಾಯಾಂಗದ ಮೇಲೆ ಹಿತಾಸಕ್ತಿಯ ಗುಂಪೊಂದು ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
ವಕೀಲರ ಪತ್ರ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಇತ್ತೀಚೆಗಿನ ತೀರ್ಪುಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಬೊಟ್ಟು ಮಾಡುವಂತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ವಿವಾದಕ್ಕೆ ಹೊಸ ತಿರುವು ಲಭಿಸಿದೆ.
ನ್ಯಾಯಾಂಗದ ಮೇಲೆ ಒತ್ತಡ ಹೇರುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದಾಗಿದ್ದು, ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿರುವುದಕ್ಕೆ ಅಚ್ಚರಿಯಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ವಕ್ತಾರ ಜೈರೂಮ್ ರಮೇಶ್, ಪ್ರಧಾನಿ ಮೋದಿ ನ್ಯಾಯಾಂಗವನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಅದರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.