ನಾನು ಸಂದರ್ಶನ ಮಾಡುವುದನ್ನು ಯಾವುತ್ತೂ ನಿರಾಕರಿಸಿಲ್ಲ. ಆದರೆ ನಾನು ಸುದ್ದಿಗೋಷ್ಠಿ ಮಾಡಲು ಇಷ್ಟಪಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 10 ವರ್ಷಗಳಲ್ಲಿ ಪ್ರಧಾನಿಯಾಗಿ ಒಂದೇ ಒಂದು ಸುದ್ದಿಗೋಷ್ಠಿ ಯಾಕೆ ಮಾಡಿಲ್ಲ? ಎಂಬ ಪ್ರಶ್ನೆಗೆ ಇದೇ ಮೊದಲ ಬಾರಿಗೆ ಕಾರಣ ನೀಡಿದರು.
ಮಾಧ್ಯಮ ಈಗ ಮೊದಲಿನಂತೆ ಇಲ್ಲ. ಅಲ್ಲದೇ ಮಾಧ್ಯಮದ ವಿಸ್ತಾರ ಕೂಡ ದೊಡ್ಡದಾಗಿದೆ. ಜನರನ್ನು ತಲುಪಲು ಸಾಕಷ್ಟು ದಾರಿಗಳು ಈಗ ಇವೆ. ಸುದ್ದಿಗೋಷ್ಠಿಯಲ್ಲೇ ಎಲ್ಲವನ್ನೂ ಹೇಳಬೇಕು ಎಂಬ ಕಾಲ ಬದಲಾಗಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ ಎಂದು ಪ್ರಧಾನಿ ಮೋದಿ ವಿವರಿಸಿದರು.
ನಾನು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸುದ್ದಿಗೋಷ್ಠಿಗಳನ್ನು ನೀಡಿದ್ದೇನೆ. ಮಾಧ್ಯಮಗಳು ಒಂದು ವಿಧದಲ್ಲಿ ಕೆಲಸ ಮಾಡುತ್ತವೆ. ಆ ದಾರಿಯಲ್ಲಿ ನಾನು ಹೋಗಲು ಸಿದ್ಧನಿಲ್ಲ. ಆದ್ದರಿಂದ ಸುದ್ದಿಗೋಷ್ಠಿ ಎಂಬ ಪ್ರಚಾರದ ಸಂದರ್ಶನಗಳನ್ನು ನಾನು ಮಾಡುವುದಿಲ್ಲ ಎಂದು ಅವರು ಹೇಳಿದರು.
ಮಾಧ್ಯಮಗಳು ಹೊಸ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಿದೆ. ಯಾವುದು ಸರಿಯಾದ ಮಾರ್ಗ ಎಂದು ಅರಿತು ಅದರಲ್ಲಿ ಮುನ್ನಡೆಯಬೇಕಾಗಿದೆ. ಒಂದು ವೇಳೆ ಸರಿಯಿಲ್ಲ ಎಂದಾದರೆ ಅದನ್ನು ಪುನರಾವರ್ತಿಸಬಹುದು ಎಂದು ಅವರು ಸಲಹೆ ನೀಡಿದರು.
ಮಾಧ್ಯಮಗಳಿಗೆ ಈಗ ಪ್ರತ್ಯೇಕತೆ ಇಲ್ಲ. ಆಂಕರ್ ಗಳು ತಮ್ಮ ಅಭಿಪ್ರಾಯಗಳನ್ನು ಜನರಿಗೆ ತಿಳಿಸುತ್ತಾರೆ ಹೊರತು ವಿಷಯಗಳನ್ನು ನೇರವಾಗಿ ಮುಟ್ಟಿಸುವುದಿಲ್ಲ. ಅಭಿಪ್ರಾಯ ಸೇರಿದ ವರದಿ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಮೋದಿ ಹೇಳಿದರು.
ನಾನು ಕಠಿಣ ಶ್ರಮ ವಹಿಸುತ್ತೇನೆ. ನಾನು ಪ್ರತಿಯೊಬ್ಬ ಬಡವರ ಮನೆಗೆ ಹೋಗಬೇಕು. ರಿಬ್ಬನ್ ಕಟ್ ಮಾಡಿ ಉದ್ಘಾಟನೆ ಮಾಡಬೇಕು. ವಿಜ್ಞಾನ ಭವನದಲ್ಲಿ ನನ್ನ ಫೋಟೊಗಳು ರಾರಾಜಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ನಾನು ಹಾಗೆ ಮಾಡಲ್ಲ. ಜಾರ್ಖಂಡ್ ನಂತಹ ಸಣ್ಣ ರಾಜ್ಯಗಳ ಸಣ್ಣ ಹಳ್ಳಿಗಳಲ್ಲಿ ನೆರವು ತಲುಪಲು ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದು ಮೋದಿ ಹೇಳಿದರು.